Monday, May 4, 2009

"ತುಂಟಾ"ಟಗಳು


ನಿನ್ನೆ ಟಿ.ವಿಯಲ್ಲಿ ಐ.ಪಿ.ಎಲ್ ಟೂರ್ನಮೆಂಟಿನ ಬೆಂಗಳೂರು ಮತ್ತು ಮುಂಬಯಿ ತಂಡಗಳ ನಡುವಿನ ಹಣಾಹಣಿ ನೋಡುತ್ತಿದ್ದಾಗ, ಪ್ರೇಕ್ಷಕರ ಗ್ಯಾಲರಿಯಲ್ಲಿ ಕನ್ನಡದ ಫಲಕ ಕಣ್ಣಿಗೆ ಬಿತ್ತು." ಬೆಂಗಳೂರು ನಾವು ನಿಮ್ಮ ಜೊತೆಗಿದ್ದೀವಿ"- ಈ ಫಲಕ ನೋಡಿದಾಗ ಓಂದು ರೀತಿಯ ಪುಳಕ. ಇದೇ ರೀತಿಯ ಒಂದು ಅನುಭವವನ್ನ ನನ್ನ ಸ್ನೇಹಿತ ಗೌತಮ್ ವಿಮಾನಯಾನದಲ್ಲಿ ಪರದೇಶದ ನೆಲದಲ್ಲಿ ಕೇಳಿದ ಕನ್ನಡದ ಮಾತುಗಳ ಬಗ್ಗೆ ತನ್ನ ಬ್ಲಾಗ್ನಲ್ಲಿ ಹಂಚಿಕೊಂಡಿದ್ದಾನೆ. ಬಹುಶ ಕನ್ನಡದ ಮಹಿಮೆಯೇ ಆ ರೀತಿ ಇರಬೇಕು. ಎಷ್ಟೇ ಭಾಷೆ ಕಲಿತರೂ ನಮ್ಮ ಭಾಷೆಯಲ್ಲಿ ಮಾತಾಡುವಾಗ ಅಥವ ಬರೆಯುವಾಗ ಏನೋ ಒಂದು ರೀತಿಯ ಅನಂದ. ಅಲ್ಲದೆ ನಮ್ಮ ಭಾಷೆಯಲ್ಲಿ ಬರೆದಾಗ ನಿಜವಾದ ಭಾವನೆಗಳು ಹೊರಹೊಮ್ಮಬಹುದು. ಅದೇ ಕಾರಣದಿಂದ "ನಮ್ಮ ಕನ್ನಡ"ದಲ್ಲಿ ಈ ನನ್ನ ಬರಹದ ಗುಚ್ಚ.
ನಾನು ಚಿಕ್ಕವನಾಗಿದ್ದಾಗಿನಿಂದ್ಲೂ ಕನ್ನಡವನ್ನ ಇಷ್ಟ ಪಟ್ಟಿದ್ದೀನಿ, ಪ್ರಥಮ ಭಾಷೆಯಾಗಿ ಓದಿದೇನೆ ಕೂಡ. ಆದ್ರೆ ಅಭಿಮಾನ ಅನ್ನೋದರ ನಿಜಾರ್ಥ ಬಹುಶಃ ತಿಳಿದಿರಲಿಲ್ಲ. ಅದು ಆಳಾವಾಗಿ ನನ್ನಲ್ಲಿ ಬೇರೂರಿದ್ದು ನಾನು ಮೈಸೂರಿನಲ್ಲಿ ನನ್ನ ವೈದ್ಯಭ್ಯಾಸ ಮಾಡೋ ಸಮಯದಲ್ಲಿ. ಈ ಬ್ಲಾಗ್ನಲ್ಲಿ ಕನ್ನಡದಲ್ಲಿ ಎನಾದ್ರೂ ಬರೆಯಬೇಕು ಅನ್ನಿಸಿದಾಗ ನನ್ನ ಮನಸಿಗೆ ಮೊದಲು ತೋಚಿದ ವಿಷಯ ಅಂದ್ರೆ ನನ್ನ ಕಾಲೇಜಿನ ದಿನಗಳು, ನೆನಪುಗಳೇನೊ ಕಾಲೇಜಿನ ದಿನಗಳದ್ದಾದರೂ ಖಂಡಿತವಗಿಯೂ ಓದಿನ ಬಗ್ಗೆ ಅಲ್ಲ. ಬದಲಾಗಿ ಕ್ಲಾಸ್ ರೂಮಿನಿಂದ ಹೊರಗೆ ಸ್ನೇಹಿತರೊಂದಿಗೆ ಕಳೆದ ಮರೆಯಲಾಗದ ಕ್ಷಣಗಳು.
ಯಾವುದೇ ಕಾಲೇಜಾಗಲಿ ಅಥವಾ ಎಲ್ಲೇ ಆಗಲಿ ನಮ್ಮ ತರಂಗಗಳಿಗೆ ಹೊಂದಿಕೊಳ್ಳೋ ಅಂತ ಸ್ನೇಹಿತರ ಗುಂಪುಗಳನ್ನ ನಾವೆಲ್ಲರೂ ಮಾಡಿಕೊಂಡಿರುತ್ತೀವಿ. ಅಂಥ ನನ್ನ ಬಳಗ ಕೂಡ ಇತ್ತು ಹಾಗೂ ಈಗಲೂ ಇದೇ ಕೂಡ. ಆ ನಮ್ಮ ಬಳಗಕ್ಕೆ ನಾವುಗಳು ಕೊತ್ತುಕೊಂಡ ಹೆಸರೇ- "೨೦೦೧ರ ತುಂಟ"ರು. ಹೆಸರು ಕೇಳಿ ಆಶ್ಚರ್ಯ ಆಯ್ತೋ ಇಲ್ಲಾ ನಗು ಬಂತೋ??? ಆ ಹೆಸರು ನಮ್ಮ ಗುಂಪಿಗೆ ಬರೋದರ ಹಿಂದೆ ಒಂದು ಸಣ್ಣ ಹಾಗೂ ಅಷ್ಟೇ ಸ್ವಾರಸ್ಯಕರ ಹಿನ್ನಲೆ ಕೂಡ ಇದೆ. ಆ ಹಿನ್ನಲೇನ ಹೆಳೋ ಮೊದಲು ನಮ್ಮ ತಂಡವನ್ನ ಪರಿಚಯ ಮಾಡಿಕೊಡುತ್ತೀನಿ. ಈ ನಮ್ಮ ತಂಡದಲ್ಲಿ ಒಟ್ಟು ಹತ್ತು ಜನ ಇದ್ದೀವಿ. ನನ್ನನ್ನ ಹೊರತುಪಡಿಸಿ ಉಳಿದವರ ಬಗ್ಗೆ ನನ್ನ ಅನಿಸಿಕೆ ಹಾಗೂ ನಾ ಕಂಡಂತೆ ಅವರುಗಳಾ ಬಗ್ಗೆ ಹೇಳಿಬಿಡುತ್ತೀನಿ. ಈ ಬ್ಲಾಗ್ ಮೂಲಕ ಅವರುಗಳಿಗೆ ಕೆಲವೊಮ್ಮೆ ಮುಖತಃ ಹೇಳಲಾಗದ ಎಷ್ಟೋ ಸಂಗತಿಗಳನ್ನ ಹೇಳಬಹುದು ಕೂಡ.
  1. ಕೆ.ಪಿ. ಪ್ರದೀಪ್- ಇವನ ಹೆಸರನ್ನ ಕರೆಯೋ ಅಭ್ಯಾಸ ಇರೋರು ಬಹಳ ಕಡಿಮೆ. ಎಲ್ಲರಿಗೂ ಈತ "ಕೆ.ಪಿ" ಎಂದೆ ಚಿರಪರಿಚಿತ. ಮಂಡ್ಯ ಹುಡುಗ ( ಅದೇನೋ ಗೊತ್ತಿಲ್ಲ, ಈ ಮಂಡ್ಯದ ಹುಡುಗರನ್ನ ನೋಡಿದರೆನೆ ಗುರುತು ಹಿಡಿಯಬಹುದು. ಅವರ ಹಾವ-ಭಾವ, ಚಲನ-ವಲನ ಎಲ್ಲಾ ಮಂಡ್ಯದ ಅಚ್ಚನ್ನ ಕಾಣಬಹುದು). ಈತನನ್ನ ಮೊದಲು ನೋಡಿದಾಗ ಅನ್ನಿಸೋದು; ಈತ ಯಾರ ಜೊತೆನಲ್ಲು ಬೆರೆಯೋದಿಲ್ಲವೇನೊ, ತುಂಬ ರಿಸರ್ವ್ಡ್ ತರ. ಆದರೆ ಬೆರೆತು ನೋಡಿದಾಗ ಅನ್ನಿಸೋದು ಅದಕ್ಕೆ ತದ್ವಿರುದ್ದ. ನೋಡಲು ತುಂಬ ರಫ್ ಅಂಡ್ ಟಫ್ ಅನ್ನಿಸಿದರೂ ಮಾತಿನಲ್ಲಿ ಮಿತಭಾಷಿ.ನಮ್ಮ ತಂಡದ ಎಲ್ಲರಲ್ಲೂ ಇರೋ ಒಂದು ಭಾವನೆ ಅಂದರೆ ನನಗೂ ಮತ್ತೂ ಕೆ.ಪಿ ಗೂ ಅಷ್ಟಾಗಿ ಹೊಂದೋದಿಲ್ಲ ಅಂತ. ಬಹುಶಃ ನಾನೂ ಕೂಡ ಅದಕ್ಕೆ ಪುಷ್ಟಿ ಕೊಡೋ ಹಾಗೆ ವರ್ತಿಸುತಿದ್ದೆ ಕೂಡ. ಆದ್ರೆ ಇದುವರೆವಿಗು ನನ್ನ ಹಾಗು ಅವನ ಮಧ್ಯ ಯಾವುದೆ ಜಗಳ ಆಗಲಿ, ಒಬ್ಬರನ್ನ ಒಬ್ಬರು ಜರಿದುಕೊಂಡು ಬೈದಿರುವುದಾಗಲಿ ಆಗಿಲ್ಲ. ಆದ್ರೂ ಎಲ್ಲರಿಂದ ಆ ಭಾವನೇನ ತೆಗಿದು ಹಾಕಿಸೋಕಾಗಿಲ್ಲ. ಈ ಬ್ಲಾಗ್ ಮೂಲಕ ಕೆ.ಪಿ ಗೆ ಹೇಳ್ಕೊಳ್ಳೋದಾದ್ರೆ ಅವನ ಬಗ್ಗೆ ಖಂಡಿತ ಒಂದು ರೀತಿ ಜಲಸಿ ಇತ್ತು. ಅದು ಯಾಕಂದ್ರೆ ಅವನಷ್ಟು ಚೆನ್ನಾಗಿ ಕಮ್ಮ್ಯುನಿಕೇಶನ್ ಸ್ಕಿಲ್ಲ್ ನನ್ನಲ್ಲಿ ಇರಲಿಲ್ಲ ಅಂತ. ಲೇ ಕೆ. ಪಿ ಆ ವಿಷಯವಾಗಿ ಖಂಡಿತ ನಿನ್ನನ್ನ ಮೆಚ್ಚಲೇಬೇಕು. ಆ ವಿಷಯದಲ್ಲಿ ನಾನು ನಿನ್ನ ರೀತಿ ಆಗೋಕೆ ಇಷ್ಟ ಪಡುತ್ತೀನಿ.
  2. ರಾಜಶೇಖರ್.ಜಿ.- ಅವನ ಅಪ್ಪ-ಅಮ್ಮ ಇಟ್ಟಿರೋ ಹೆಸರಿಗಿಂತ ಪ್ರಸಿದ್ದಿ ಪಡೆದ ಅವನ ಅಡ್ಡ ಹೆಸರೇ-"ಷಾ". ಆ ಹೆಸರು ಬರೋಕೆ ಕಾರಣಾನ ಇಲ್ಲಿ ಹೇಳೋಕ್ಕಾಗಲ್ಲ, ಕ್ಷಮಿಸಿ!! ಈತ ವಿಜಯನಗರದ ವೀರಪುತ್ರ. ಇವನೇನದ್ರೂ ವೈದ್ಯ ವೃತ್ತಿಗೆ ಬರಲ್ಲಿಲ್ಲ ಅಂದ್ರೆ ಪ್ರಾಯಶಃ ಹೊಸಪೇಟೇಲಿ ಟೂರಿಸ್ಟ್ ಗೈಡ ಆಗಿ ಕೆಲ್ಸ ಮಾಡ್ತಿದ್ದನೊ ಏನೋ. ಯಾರಾದ್ರೂ ಇವನ ಜನ್ಮಸ್ಥಳ ಹೊಸಪೇಟೆಯ ಬಗ್ಗೆ ಜರಿದರೆ ಮುಗೀತು, ವಿಜಯನಗರದ ಕಾಲದಲ್ಲಿ ತಪ್ಪಿತಸ್ಥರನ್ನದ್ರೂ ಕ್ಷಮಿಸುತ್ತಿದ್ರೋ ಏನೋ, ಇವನ ಬಾಯಲ್ಲಿ ಬರೋ ಕನ್ನಡದ ನಿಂದನಾ ಪದಗಳು ಅದಕ್ಕಿಂತ ಘನಘೋರ. ನಮ್ಮ ತಂಡ ಎನಾದ್ರೂ ಸ್ಟೇಜ್ ಪರ್ಫಾಮೆನ್ಸ್ ಕೊಡೋಕೆ ಹೆಸರು ನೊಂದಾಯಿಸಿ ಪರ್ಫಾಮ್ ಮಾಡಲಿಲ್ಲ ಅಂದ್ರೆ ಅದಕ್ಕೆ ಮೂಲ ಕಾರಣ ಈ ಮಹಾಶಯ. ಕೊನೇ ಕ್ಷಣದಲ್ಲಿ ಕೈ ಎತ್ತೋದ್ರಲ್ಲಿ ನಿಪುಣ. ಲೇ ಎಲ್.ಕೆ.ಬಿ ನಿನ್ನ ಮೇಲೆ ಇನ್ನ ಸಿಟ್ಟು ಹೋಗಿಲ್ಲ ಇವನ ಹಾಗೆ ಜೀವನವನ್ನ ಖುಷಿಯಿಂದ ಜೀವಿಸಿ, ಕಷ್ಟ ಇದ್ದ್ರೂ ತೋರಿಸ್ಕೊಳ್ಳದೆ ಮುನ್ನುಗ್ಗೊ ಸ್ವಭಾವ ನನಗಿಷ್ಟ.
  3. ತೇಜಸ್ವಿ ಕುಮಾರ್.ಎ.ಬಿ.- ನಮ್ಮ ತಂಡದ ಮಾನಸಿಕ ರೋಗ ವೈದ್ಯ. ಅಂದ್ರೆ ಯಾರೇ ಆಗಲಿ ಏನದ್ರು ಕನ್ಫ್ಯೂಷನಲ್ಲಿ ಇದ್ದರೆ, ಅಂತವರಿಗೆ ಅವರು ಮಾಡೋಕೆ ಹೊರಟಿರ‍ೋ ಕೆಲಸದ ಬಗ್ಗೆ ಒಲವು ಮೂಡಿಸಿ ಅವರ ಮೂಡನ್ನು ಸರಿ ಮಾಡೋದರಲ್ಲಿ ಎತ್ತಿದ ಕೈ. ಸಾಕ್ರೇಟಿಸ್ ಕೂಡ ಇಷ್ಟು ಫಿಲಾಸಫಿ ಹೇಳ್ತಿದ್ದನೋ ಏನೋ ನಾನಂತೂ ಕಂಡಿಲ್ಲ, ಆದರೆ ನಮ್ಮ ಶಿವಮೊಗ್ಗೆಯ ಈ ಹುಡುಗ ಅವನನ್ನ ಮೀರಿಸೋದು ಖಂಡಿತ. ಅದಕ್ಕೆ ಇವನನ್ನ ಅಭಿನವ "ಸಾಕ್ರೇಟಿಸ್"ಅಂತ ನಾಮಂಕಿತ ಮಾಡಿದ್ದೀವಿ. ನೋಡೋಕೆ ಸೋಂಬೇರಿ ಅಂತ ಅನ್ನಿಸಿದರೂ ಕೊಡ ನಮ್ಮ ತಂಡದ ಅತಿ ಹೆಚ್ಚು ಕೆಲಸಗಾರ. ಯಾರಿಗೇ ಆದ್ರೂ ಸಹಾಯ ಮಡೋಕೆ ಹಿಂದೂಮುಂದೂ ನೋಡದಂತ ಹುಡುಗ. ಅವನ ಆ ಶಾಂತ ಸ್ವಭಾವ ನನಗೂ ಸ್ವಲ್ಪ ಎರವಲು ಪಡೆಯೋ ಆಸೆ.
  4. ಚಿದಾನಂದ.ವಿ.- ನಾವೆಲ್ಲ ಸಿನಿಮಾಗಳಲ್ಲಿ ಹೀರೋಗಳಿಗೆ ಬಿರುದುಗಳು ಇರೋದು ನೋಡಿರ್ತೀವಿ. ಇಲ್ಲಿದ್ದಾನೆ ನಮ್ಮ ತಂಡದ "ರೈಸಿಂಗ್ ಸ್ಟಾರ್". ಆ ಬಿರುದು ನೀವಂದುಕೊಳ್ಳೋ ತರಹ ಅಲ್ಲ. ಯಾರಾದ್ರು ಯದ್ವಾ ತದ್ವಾ ಮಾತಾಡಿದ್ರೆ ಸಾಕು, ಈ ನಮ್ಮ ಹುಡುಗನಿಗೆ ಕೋಪ ನೆತ್ತಿಗೆ ಎರಿಬಿಡುತ್ತೆ. ಸೋ, ಬಹಳ ಬೇಗ ರೈಸ್ ಆಗೋದ್ರಿಂದ ಇವನು ರೈಸಿಂಗ್ ಸ್ಟಾರ್. ಈತ ಹಾಸನದ ಚೆಲುವ ಕೊಡ. ತುಂಬ ಮೃದು ಸ್ವಭಾವ, ಓದಿನಲ್ಲಿ ಅಷ್ಟೇ ನಿಷ್ಟೆ ಇರುವವ. ಈತನ ಜೀವನದಲ್ಲಿನ ಘಟನೆಗಳು ಏನಾದ್ರೂ ಹೀರೋ ಸುದೀಪಗೆ ಸಿಕ್ಕಿದ್ರೆ ಇವನ ಕಥೆಯನ್ನ ಆಟೋಗ್ರಾಫ್ ಸಿನಿಮಾ ಮಾಡಬಹುದಿತ್ತು. ಲೇ ಚಿದು, ಏನೇ ಆದರೂ ನಾವೆಲ್ಲ ನಿನ್ನ ಜೊತೆ ಇದ್ದೀವಿ, ಧೈರ್ಯವಾಗಿರು.
  5. ವಿನಯ್.ಎಸ್,ಆರ್.- ಕರ್ನಾಟಕ ರಾಜ್ಯಕ್ಕೆ ಮುಂದೊಂದು ದಿನ ಈತ ಮುಖ್ಯಮಂತ್ರಿ ಆದ್ರೂ ಆಶ್ಚರ್ಯ ಇಲ್ಲ. ಏನಿಲ್ಲ ಅಂದರೂ ಆಹಾರ ಖಾತೆ ಸಚಿವ ಅಂತೂ ಆಗೇ ಆಗ್ತಾನೆ. ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗದ ಭವಿಷ್ಯದ ರಾಜಕಾರಿಣಿ. ನಮ್ಮ ಹಾಸ್ಟೆಲ್ಲಿನ ಅನ್ನದಾತ. ಈತ ಹಾಸ್ಟೆಲ್ ಮೆಸ್ಸ್ ಗೆ ಎಷ್ಟು ಬಾರಿ ಪ್ರಿಫೆಕ್ಟ್ ಆಗಿದ್ದನೆ ಅಂತ ಅವ್ನಿಗೇನೇ ಲೆಕ್ಕ ಇಲ್ಲ. ಹತ್ತು ರೂಪಯಿಯಲ್ಲಿ ಒಂದು ಫಫ್ಸ್, ಒಂದು ಕೇಕ್ ಹಾಗೂ ಒಂದು ಟೀ ತರಿಸಿ, ಅದರಲ್ಲಿ ಐದು ರೂಪಾಯಿಯನ್ನ ಉಳಿಸುವ ಕಲೆ ಈತನಿಗೆ ಕರಗತ. ಜೀವನವನ್ನ ಹೇಗೆ ರೂಪಿಸಿಕೊಳ್ಳಬೇಕು ಅನ್ನೊದನ್ನ ಇವನನ್ನ ನೋಡಿ ಕಲಿಯಬೇಕು. ಅಂದಹಾಗೆ, ಇವನ ಅಡ್ದಹೆಸರು "ಕಾಚಪ್ಪ". ಅದು ಯಾಕೆ ಬಂತು ಅಂತಾ ಮುಂದೆ ಹೇಳ್ತೇನೆ.
  6. ಮಹೇಶ್ ಮೂರ್ತಿ.- ಹೆಸರೇ ಹೇಳೊ ಹಾಗೆ ಮೂರ್ತಿ ಚಿಕ್ಕದಾದರೂ , ಇವನ ಕಾರ್ಯಗಳಿಂದ ಕೀರ್ತಿವಂತ. ಅಂದಹಾಗೆ ಕಾರ್ಯಗಳು ಅಂದ್ರೆ ಎಲ್ಲಾ ಅಡ್ಡಾದಿಡ್ಡಿ ಕೆಲಸಗಳು. ಇವ ಯಾವುದೇ ಕೆಲಸ ಮಾಡಲು ಹೋದ್ರೂ ಡಿಫ್ರೇಂಟಾಗಿ ಮಾಡೋ ಚಟ. ಆದ್ರೆ ದುರಾದೄಷ್ಟ ಅವೆಲ್ಲ ಹೊಗೆಯಾಗಿ ಹೋಗ್ತಾವೆ. ಅದಕ್ಕೆ "ಹೊಗೆ ಮೂರ್ತಿ" ಅಂತಾನೆ ಫೇಮಸ್. ಈತನ ಜನ್ಮಭೂಮಿ- ಶಿವಮೊಗ್ಗ ಜಿಲ್ಲೆಯ, ಅಕ್ಕಮಹಾದೆವಿಯ ಊರಾದ ಉಡುತಡಿಯ ಪಕ್ಕದ ತಡಗಣಿ. ಪೂರಾ ಹೀಗೆ ಹೇಳದಿದ್ದರೆ ಇವನ ಕೊರೆತ ನಿಮಗೆ ಕಟ್ಟಿಟ್ಟ ಬುತ್ತಿ. ಹೊಗೆಯ ಕಥೆಗಳನ್ನ ಖಂಡಿತ ಮುಂದೆ ಹೇಳುತ್ತೇನೆ.
  7. ಪ್ರವೀಣ್ ಕುಮಾರ್. ಎನ್- ನಮ್ಮ ತಂಡದ ಪುಟ್ಟಣ್ಣ "ಕಣಗಾಲ್". ನಿಜವಾಗಿಯೂ ಈತ ಕಣಗಾಲಿನ ಊರಿನವನೆ, ಆದರೆ ಸ್ವಲ್ಪ ಪಕ್ಕದೂರು ಅಷ್ಟೆ!! ನಮ್ಮ ತಂಡದ ಕ್ರಿಯಾತ್ಮಕ ತಲೆ. ನಾವು ಫರ್ಫಾಮ್ ಮಾಡಿದ ಭಕ್ತ ಪ್ರಹ್ಲಾದ ಮೂವಿ ಸ್ಫೂಫ್ ನ ಯಶಸ್ಸಿನ ಹಿಂದಿನ ಧ್ವನಿ. ನಿಜವಾಗಿಯು ಕಂಚಿನ ಕಂಟದ ಹುಡುಗ. ಆದರೆ ಈತನ ಹಿಂದಿ ಹಾಡುಗಳನ್ನ ಕೇಳಿದರೆ,ರ್ ರ್ ರ್ ರ್...ಬೇಡ ಬಿಡಿ. ಸ್ವಲ್ಪ ಮಟ್ಟಿಗೆ ಇರಿಟ್ಟೇಟ್ ಮಾಡಿದ್ರೂ ಕೂಡ ಎಲ್ಲರೊಂದಿಗೆ ಹೊಂದಿಕೊಳ್ಳೊ ಸ್ವಭಾವ. ಆದ್ರೆ ಅಪ್ಪಟ ಸೋಂಭೇರಿ. ಕಥೆ ಹೇಳೋದರಲ್ಲಿ ಎತ್ತಿದ ಕೈ. ಒಮ್ಮೆ ಆತನೇ ಹೇಳಿಕೊಂಡ ಆತನ ಲವ್ ರಾತ್ರಿಯ ಕಥೆಯನ್ನ ಮುಂದೆ ಹೇಳುತ್ತೇನೆ.
  8. ಗಿರೀಶ್.ಎಂ.ಟಿ- ನನ್ನ ರೂಂ ಮೇಟ್ ಕೂಡ. ಮಿಂಚಿನಂತ ವಾಲಿಬಾಲ್ ಆಟಗಾರ, ಅಥ್ಲೀಟ್, ರಸಿಕ, ಇನ್ನೊ ಏನೇನೋ..!!! ವಾಲಿಬಾಲ್ ಆಟದಲ್ಲಿ ಈತ ಹಾಕುವ ಗ್ಯಾಪ್ ಗಳಿಗೆ ಫೇಮಸ್. ಅದಕ್ಕೇ ಈತ "ಗ್ಯಾಪ್ ಗಿರಿಯಾ". ಮಳವಳ್ಳಿಯ ಮಳ್ಳ, ನಿದ್ದೆ ಬರದ ಎಷ್ಟೋ ರಾತ್ರಿಗಳಲ್ಲಿ ನನಗೆ ಜೊತೆ ನೀಡಿದ ಹುಡುಗ( ಮಾತಿಗೆ ಮಾತ್ರ, ಏನೇನೋ ಯೊಚಿಸಬೆಡಿ). ಕ್ರಿಕೆಟನಲ್ಲಿ ಇತ್ತೀಚಿಗೆ ಬೆಳಕಿಗೆ ಬಂದಿರೊ ಸ್ಲೋ ಬಾಲನ್ನ್ ಈತ ಹುಟ್ಟಿದಾಗಿನಿಂದ ಬೌಲ್ ಮಾಡಬಲ್ಲ. ಶೊಯೆಬ್ ಅಖ್ತರ್ ಸ್ಪೀಡನಲ್ಲಿ ಓಡಿ ಬಂದು ಹರ್ಭಜನನ ಸ್ಪೀಡನಲ್ಲಿ ಬೌಲ್ ಮಾಡೋ ಚಾತುರ್ಯ ಈತನದು.
  9. ಪ್ರದೀಪ್.ಜಿ- ನಮ್ಮ ಸ್ಕಿಟಗಳ ಹೀರೋ. ನಮ್ಮ ಸ್ಕಿಟ್-ಗಳನ್ನ ಗೆಲ್ಲಿಸೋದರಲ್ಲಿ ಇವನ ಪಾತ್ರ ಕೂಡ ಅಪರಿಮಿತ. ಆದರೆ ನಮ್ಮ ತಂಡದಿಂದ ಅರ್ಧದಲ್ಲೆ ಬೇರ್ಪಡೆಯಾದವ. ಯಾಕೆ? ಹೇಗೆ? ಇದಕ್ಕೆ ಉತ್ತರ ಬಹುಶಃ ಅವನ ಬಳಿಯೂ ಇಲ್ಲ, ನಮ್ಮ ಬಳಿಯೂ ಇಲ್ಲ.ನನ್ನ ಕಡೂರು ಊರಿನವನಾದ ಈತನ ಮೇಲೆ ಅದೇನೋ ಒಂದು ರೀತಿ ಅಭಿಮಾನ. ನಮ್ಮ ತಂಡದಿಂದ ದೂರಾದರೂ ನಮ್ಮವನೇ ಆದ "ಕಿಟ್ಟಿ".
ಇವರೇ ನಮ್ಮ ೨೦೦೧ ತುಂಟರ ಜೊತೆಗಾರರು. ನಮ್ಮ ತಂಡಕ್ಕೆ ಈ ಹೆಸರು ಬರಲು ಕಾರಣವೇನು ಹಾಗೂ ನಮ್ಮ ನಡುವೆ ನಡೆದ ಸ್ವಾರಸ್ಯಕರ ಘಟನೆಗಳನ್ನ ನನ್ನ ಮುಂದಿನ ಬ್ಲಾಗ್-ಗಳ ತರುವಾಯ ಬಿಚ್ಚಿಡುತ್ತಾ ಹೋಗುತ್ತೇನೆ. ನಮ್ಮಗಳ ನೆನಪುಗಳಲ್ಲಿ ನಿಮ್ಮನೆಲ್ಲರನ್ನೂ ಪಯಣ ಮಾಡಿಸೋ ಭರವಸೆಯೊಂದಿಗೆ ಮತ್ತೆ ಬರೆಯುತ್ತೇನೆ. ಅಲ್ಲಿಯವರೆಗು ನೆನಪಿಡಿ- ನಾವು "೨೦೦೧ರ ತುಂಟ"ರು.


3 comments:

  1. Lo Rakesh,good one le..keep this going..i m sure there is still lot of masala available[:D]

    ReplyDelete
  2. lo raki..
    ur handwriting in kannada used to be exactly like here..PRINTED Kannada..

    ReplyDelete
  3. En maadado, eega chennagi baredre profession ge avamana madidange...irony...he he

    ReplyDelete