Monday, March 14, 2011

ಬೆಳೆಸೋದಾ? ಬೆಳೆಯಲು ಬಿಡೋದಾ?

ಈಗ ಎಲ್ಲಿ ನೋಡಿದರೂನು "ಕ್ರಿಕೆಟ್ ಜ್ವರ". ನಮ್ಮ ಹಳ್ಳಿಯ ಪುಟ್ಟ ಹುಡುಗನಿಂದ ಹಿಡಿದು ಜಾತ್ರೆಯಲ್ಲಿ ದನ ಕೊಳ್ಳೋ ಹಾಗೆ ಕ್ರಿಕೆಟಿಗರನ್ನ ಕೊಂಡುಕೊಂಡಿರುವ ಮಲ್ಲ್ಯ ಸಾಹೇಬರ ಬಳಗದಂತಿರೋ ವ್ಯವಹಾರಸ್ತರ, ಇಷ್ಟು ದಿನ ಕಾಲಿ ಕೂತಿದ್ದ ಬುಕ್ಕಿಗಳ, ಪ್ರಸಾರ ಮಾಡೋಕೆ ಒಂದೂವರೆ ತಿಂಗಳಿನ ತನಕ ಸುದ್ದಿ ಸಿಕ್ಕಿದೆ ಅಂತ ಹಿರಿ ಹಿರಿ ಹಿಗ್ಗುತ್ತಾ ಇರೋ ಮಾಧ್ಯಮಗಳ, ತಮ್ಮ ಹೊಸ ಪ್ರಿಯಕರ/ಪ್ರೇಯಸಿಯೊಡನೆ "ಜಸ್ಟ್ ಫ್ರೆಂಡ್ಸ್" ಅಂತಾನೆ ಎಲ್ಲ ಕ್ರಿಕೆಟ್ ಮೈದಾನಗಳಲ್ಲೂ ಕಾಣಿಸಿಕೊಳ್ಳೋ ನಾಯಕ ನಾಯಕಿಯರುಗಳ, ಮಾಡೋಕೆ ಜನ್ಮಕ್ಕೆ ಆಗೋ ಅಷ್ಟು ಕೆಲಸ ಇದ್ದರೂ ಕೇವಲ ಒಂದು ಪಂದ್ಯದ ಟಿಕೆಟ್ ಸಿಗಲಿಲ್ಲ ಅನ್ನೋ ವಿಷಯ ವಿಧಾನ ಮಂಡಲದಲ್ಲಿ ಚರ್ಚೆ ಮಾಡಬೇಕು ಅಂತ ಗುಟುರು ಹಾಕೋ ನಾಲಾಯಕ್ ರಾಜಕಾರಣಿಗಳ.... 
ಹೀಗೆ ಹೇಳ್ತಾ ಹೋದ್ರೆ ಎಲ್ಲರನ್ನೂ ಸೇರಿಸ್ಕೊಂಡು ಹೇಳಬೇಕಾಗುತ್ತೆ. ಹಾಗಾಗಿ ಇಂತಿಪ್ಪ ಎಲ್ಲರ ಮೈಮನಗಳಲ್ಲಿ ಈಗ ಸುಳಿದಾಡುತ್ತ ಇರೋ ಒಂದೇ ಪ್ರಮುಖ ವಿಷಯ ಅಂದರೆ-"ಕ್ರಿಕೆಟ್".  ಸೋಜಿಗ ಅಂದರೆ, ಇವರುಗಳಲ್ಲಿ ಕನಿಷ್ಠ 80 % ಜನಕ್ಕೆ ಈ ಆಟದ ಬಗ್ಗೆ ಗಂಧಾನೆ ಇರೋಲ್ಲ. ಆದ್ರೂನು 'ಪಾಯಸ ಕೊಟ್ಟೋರ ಕಡೆಗೆ ಪಂಚಾಯತಿ ಮಾಡಿದ' ಅನ್ನೋ ಹಾಗೆ ತೋಚಿದ್ದು-ತೋಚದೆ ಇರೋದು ಎಲ್ಲಾನೂ ಮಾತಾಡ್ಕೊಂಡು ತಮಗೂ ಕ್ರಿಕೆಟ್ ಬಗ್ಗೆ ಏನೂ ಗೊತ್ತಿಲ್ಲ ಅನ್ನೋದನ್ನ ಜಗಜ್ಜಾಯಿರ ಮಾಡ್ಕೊಳ್ಳೋ ಮೂರ್ಖ ಶಿಖಾಮಣಿಗಳೇ ಹೆಚ್ಚು.
ಹೋಗ್ಲಿ ಬಿಡಿ, ನಮ್ಮ ದೇಶದ ಜನಕ್ಕೆ ಮಕ್ಕಳನ್ನ ಮಾಡೋ ವೃತ್ತಿಯಿಂದ ಸ್ವಲ್ಪ ಸಮಯ ವಿರಾಮ ಕೊಡೋದ್ರಲ್ಲಾದ್ರು ಈ ಕ್ರಿಕೆಟ್ ಸ್ವಲ್ಪ ಮಟ್ಟಿಗೆ ಯಶ ಕಂಡಿದೆ ಅಂತಲೇ ಭಾವಿಸಿಕೊಂಡು, ನಮ್ಮ ವಿಷಯಕ್ಕೆ ಬರೋಣ. 
ಹೌದು, ನಮ್ಮಲ್ಲಿ ಎಷ್ಟು ಜನಕ್ಕೆ ನಾನು ಈ ಕೆಳಗೆ ಪಟ್ಟಿ ಮಾಡೋ ಆಟಗಳ ಬಗ್ಗೆ ತಿಳಿದಿದೆ? " ಕುಂಟಾಬಿಲ್ಲೆ"- "ಚಿನ್ನಿ ದಾಂಡು"- "ಮರ ಕೋತಿ"- "ಲಗೋರಿ"- " ಟಿಕ್ಕಿ"- "ಎಂಟು ಮನೆ/ ಹದಿನಾರು ಮನೆ ಆಟ"- "ಗೋಲಿ"- "ಚಿಣಿಮಿಣಿ"- "ಉಪ್ಪು ಕೊಡೆ ಸಾಕಮ್ಮ" ???? ಹೇಳ್ತಾ ಹೋದ್ರೆ ಮುಗಿಯಲಾರದಷ್ಟು ದೊಡ್ಡ ಪಟ್ಟಿ ಇದೆ, ಅಲ್ಲದೆ ಇವು ಕೇವಲ ನನ್ನ ನೆನಪಿನಲ್ಲಿ ಇರೋ-ಅಥವಾ ನಾನು ಕೇಳಿರೋ ನಮ್ಮ ಹಳ್ಳಿ ಆಟಗಳು. ನಾನು ಕೇಳದೆ/ಆಡದೆ ಇರೋ ಸಾಕಷ್ಟು ನಮ್ಮ ಮಣ್ಣಿನ ಸೊಗಡಿನ ಆಟಗಳು ಅವೆಷ್ಟಿದೆಯೋ ನಾ ಕಾಣೆ. 
ಹುಟ್ಟೋ ಮಗು ಇನ್ನ ಅಂಬೆಗಾಲು ಇಡೋಕೆ ಶುರು ಮಾಡಿದ್ದೆ ತಡ ನಾವುಗಳು ಅದಕ್ಕೆ ಆಗ್ಲೇ ಕ್ರಿಕೆಟ್ ಬ್ಯಾಟ್, ಹಾರೋ ಹೆಲಿಕಾಪ್ತೆರ್ ತಂದು ಕೊಟ್ಟಿರ್ತಿವಿ. ಆದ್ರೆ ಈ ಮೇಲೆ ತಿಳಿಸಿದ ಆಟಗಳ ಬಗ್ಗೆ ಹೇಳಿಕೊಡೋದು ಇರಲಿ, ನಮ್ಮ ಹಳ್ಳಿ ಕಡೆನೇ ಅವರನ್ನ ಕಳಿಸೋಲ್ಲ ಅಲ್ಲವ? ಹಿಂದಿನ ಕಾಲದಲ್ಲಿ ಬೇಸಿಗೆ ರಜ ಬಂತು ಅಂದ್ರೆ, ಹಳ್ಳಿಲಿ ಇರೋ ಅಜ್ಜಿ ಮನೆಗೆ ಓಡಿ ಹೋಗೋ ಮಕ್ಕಳು ಎಲ್ಲಿ, ಈಗಿನ ಕಾಲದಲ್ಲಿ ಬೇಸಿಗೆ ರಜ ಬಂತು ಅಂದ್ರೆ ಡಾನ್ಸ್/ಸಿಂಗಿಂಗ್/ಕರಾಟೆ/ಡ್ರಾಯಿಂಗ್ ಕ್ಲಾಸಸ್ ಅಂತ ಸ್ಟೇಟಸ್ ತೋರ್ಪಡಿಸೋ ಹುಚ್ಚು ಆಡಂಬರಗಳು ಎಲ್ಲಿ?
ಅಲ್ಲದೆ ಮೇಲೆ ಹೇಳಿದ ಆಟಗಳು ಖರ್ಚನ್ನ ಕೂಡ ಬಯಸೋಲ್ಲ. "ಕುಂಟಾಬಿಲ್ಲೆ" ಆಡೋಕೆ ಚೆನ್ನಾಗಿ ಸವೆದಿರುವ ಕಲ್ಲಿಂದ ಸ್ವತಹ ಮಾಡಿದ ಒಂದು 'ಬಿಲ್ಲೆ' - ಅಂಗಳದಲ್ಲಿ ಒಂದಷ್ಟು ಜಾಗ ಇದ್ರೆ ಸಾಕು. ದಿನ ಪೂರ್ತಿ ಹೊತ್ತೇ ಹೋಗಿದ್ದು ತಿಳಿಯೋಲ್ಲ. ಇನ್ನ "ಟಿಕ್ಕಿ''ಗೆ ಉಪಯೋಗಿಸಿ ಬಿಸಾಡಿದ ಬೆಂಕಿ ಪೊಟ್ಟಣದ ಕವರ್ ಸಾಕು. ಒಂದು ಪೊಟ್ಟಣದಿಂದ ಎರಡು ಟಿಕ್ಕಿ ಸಿಕ್ಕಂಗಾಯ್ತು. ಹೀಗೆ 4 ಜನ ಹುಡುಗರು ಸೇರಿಕೊಂಡು ಆ ಟಿಕ್ಕಿಗಳ  ರಾಶಿಯನ್ನ, ಮಣ್ಣಿನಿಂದ ಮಾಡಿದ ಗುಡ್ಡೆ ಮೇಲೆ ನಿಲ್ಲಿಸಿ, ನಿಗದಿತ ದೂರದಿಂದ ಮತ್ತದೇ "ಬಚ್ಚ"( ಕಲ್ಲನ್ನ ಸವೆದು ಮಾಡಿಕೊಳ್ಳೋ ಒಂದು ಸಣ್ಣ ಬಿಲ್ಲೆ) ದಿಂದ ಬೀಸಿ ಹೊಡೆದರೆ, ಆ ಮಣ್ಣು ಗುಡ್ಡೆಯಿಂದ ಹಾರಿ ಹೊರ ಬೀಳೋ ಟಿಕ್ಕಿಗಳಿಗೆಲ್ಲ ಗುರಿ ಇಟ್ಟವನೆ ರಾಜ. ಆ ಬೆಲೆಯಿಲ್ಲದ ಟಿಕ್ಕಿಗಳನ್ನ ಗೆಲ್ಲೋದರಲ್ಲಿ ಇದ್ದ ಮಜವನ್ನ ಇವತ್ತಿನ ಯಾವುದೇ ಜೂಜಾಟಾನೂ ಕೂಡ ನಿಮಗೆ ಕೊಡೊದು ಸಾಧ್ಯಾನೆ ಇಲ್ಲ. ಈಗಿನ ದಿನದಲ್ಲಿ ಮಗು ಏನಾದ್ರು ಸ್ಕೂಲಲ್ಲಿ ಬಿದ್ದು ಗಾಯ ಮಾಡ್ಕೊಂಡ್ರೆ ಪ್ರಿನ್ಸಿಪಾಲ್ ಮೇಲೆ ಕೇಸ್ ಹಾಕೋ ಪೋಷಕರು, ನಾವುಗಳು ''ಮರ ಕೋತಿ" ಆಡೋವಾಗ ಬಿದ್ದದ್ದನೆಲ್ಲ ಲೆಕ್ಕ ಹಾಕೊಕು ಸುಸ್ತು ಹೊಡಿತಿದ್ರೆನೋ?
ತಮ್ಮ ಮಕ್ಕಳಿಗೆ ಇಂತ ಆಟ ಆಡಿ, ಇಂತದನ್ನ ಆಡಬೇಡಿ ಅಂತ ಹೇಳೋ ಅಧಿಕಾರ- ಹಕ್ಕು ಎಲ್ಲ ತಂದೆ ತಾಯಂದಿರಿಗುನು ಇದೆ, ಒಪ್ಕೊಳ್ಳೋಣ. ಆದ್ರೆ ಮಕ್ಕಳಿಗೆ ಆ ರೀತಿ ನಿರ್ಬಂಧ ಹಾಕೋವಾಗ ತಾವು ಸರಿ ಇದೇವೆ ಅನ್ನೋದು ಎಷ್ಟು ಮಂದಿಗೆ  ಗೊತ್ತಿರತ್ತೆ? ಹಾಗಂತ ನಮ್ಮ ಮಕ್ಕಳಿಗೆ ಮೇಲೆ ಹೇಳಿದ ಆಟಗಳನ್ನೇ ಆಡಿಸಿ ಅಂತ ಅಲ್ಲ. ಮಕ್ಕಳನ್ನ ಮಕ್ಕಳಾಗಿ ಇರೋಕೆ ಬಿಡಿ. 
ಸೂಕ್ಷ್ಮವಾಗಿ ಗಮನಿಸಿ ನೋಡಿದ್ರೆ, ಹಿಂದಿನ ಕಾಲದಲ್ಲಿ ಆಡ್ತಾ ಇದ್ದ ಆಟಗಳು ಕೇವಲ ಆಟಗಳಾಗಿರಲಿಲ್ಲ. ಅವು ಪ್ರಕೃತಿದತ್ತ ಪಾಠಗಳಾಗಿದ್ದವು. "ಕುಂಟಾಬಿಲ್ಲೆ"ಯ ಆಟ ಕುಂಟಿಕೊಂಡು ಆಡಬೇಕು. ಅದು ಕುಂಟಿದರುನು ಗುರಿ ಮುಟ್ಟು ಅನ್ನೋ ಸಂದೇಶ ಕಲಿಸಿದರೆ, "ಟಿಕ್ಕಿ" ಸಣ್ಣ ಪೊಟ್ಟಣ ಕೂಡ ಸಂತೋಷವನ್ನ ಕೊಡಬಲ್ಲದು ಅನ್ನೋದನ್ನ ಸೂಚಿಸುತ್ತಿತ್ತು. "ಮರಕೋತಿ" ಆಟ ಹಸಿರಿನೊಂದಿಗೆ ಬೇರೆಯೋ ಪರಿಪಾಟ ಬೆಳೆಸಿದರೆ, "ಹದಿನಾರು ಮನೆ, ಎಂಟು ಮನೆ ಆಟ" ಬುದ್ದಿಯ ತೀಕ್ಷ್ಣತೆ ಮತ್ತು ಸಂಧರ್ಬ್ಹೊಚಿತ ನಡೆಯನ್ನ ಕಲಿಸಿಕೊಡುತಿತ್ತು. ಈಗ ನೀವೇ ಹೇಳಿ, ಯಾವ ಜಾನಿ ಸಕ್ಕರೆ ತಿಂದ ಅನ್ನೋದು ತಿಳಿಯೋದು ಮುಖ್ಯಾನೋ ಅಥವಾ ನಿಮ್ಮ ಮಗು ಸಕ್ಕರೆಗು-ಉಪ್ಪಿಗೂ ವ್ಯತ್ಯಾಸ ತಿಳಿಯೋ ಬುದ್ದಿಮಟ್ಟ ಬೆಳೆಸಿಕೊಳ್ಳೋದು  ಮುಖ್ಯಾನೋ?
ಆದ್ದರಿಂದ, ಬೇಸಿಗೆ ರಜೆ ಓಡಿ ಬರ್ತಾ ಇದೆ. ನಿಮ್ಮ ಮಕ್ಕಳನ್ನ ಮನೆಯೋಳಗೋ, ಇಲ್ಲ ಮನೆಪಾಠಗಳಿಗೋ ದೂಡಿ ಅವರುಗಳನ್ನ ಗಿಳಿಗಳನ್ನಾಗಿ  ಮಾಡಬೇಡಿ. ಸ್ವಚ್ಚಂದವಾಗಿ ತಮಗೆ ಇಷ್ಟ ಬಂದಿದ್ದನ್ನ ಮಾಡೋಕೆ ಬಿಡಿ. ಮಕ್ಕಳನ್ನ ಅವ್ರಿಗೆ ಇಷ್ಟ ಆಗೋ ಹಾಗೆ ಬೆಳೆಸಿ. ನಮ್ಮ ಇಷ್ಟಕ್ಕೆ ತಕ್ಕಂತೆ ಅಲ್ಲ. ವರ್ಲ್ಡ್ ಕಪ್, ಐ.ಪಿ.ಎಲ್. ಇವೆಲ್ಲೇ ಇದ್ದೆ ಇರ್ತವೆ. ಸಿನಿಮಾಗಳು ಬರ್ತಾನೆ ಇರ್ತವೆ. ಅವುಗಳಿಗೆಲ್ಲ ರಜೆ ಹಾಕಿ, ರಜೆಯ ನಿಜವಾದ ಸವಿಯನ್ನ ಸವಿಯಿರಿ. ಪ್ರಕೃತಿಗಿಂತ ದೊಡ್ದವರಿಲ್ಲ. ಪ್ರಕೃತಿಯ ವಿರುದ್ದವಾಗಿ ಬದುಕೋದು ಬೇಡ. ನಮ್ಮ ಮಕ್ಕಳನ್ನ ಕೂಡ ಹಾಗೆ ಬೆಳೆಸೋದು ಬೇಡ!  ಬೆಳೆಸೋದಾ? ಬೆಳೆಯಲು ಬಿಡೋದಾ? ಅನ್ನೋ ಜಿಜ್ಞಾಸೆ ಬೇಡ. ಬೆಳಯಲು ಬಿಡಿ.