Thursday, April 21, 2011

ಕನ್ನಡದ ಪ್ರೇಕ್ಷಕನಾಗಿ ನಾನು ಡಬ್ಬಿಂಗ್ ವಿರೋಧಿಸುತ್ತೇನೆ!!!

ಕನ್ನಡ ಚಿತ್ರರಂಗದಲ್ಲಿ ಮತ್ತೆ ಡಬ್ಬಿಂಗ್ ವಿವಾದ ಶುರುವಾಗಿದೆ. ಡಬ್ಬಿಂಗ್ ಬೇಕಾ? ಬೇಡವಾ? ಅನ್ನೋ ಚರ್ಚೆ ಎಲ್ಲೆಲ್ಲು ನಡೀತಾ ಇದೆ.  ಡಬ್ಬಿಂಗ್ ಮಾಡೋದು ಎಷ್ಟು ಸರಿ-ತಪ್ಪು ಅನ್ನೋದನ್ನ ನಾನು ವಿಶ್ಲೇಷಣೆ ಮಾಡೋದು ಎಷ್ಟರ ಮಟ್ಟಿಗೆ ಸರಿ ಅನ್ನೋದೇ ಒಂದು ಜಿಜ್ಞಾಸೆ , ಯಾಕಂದ್ರೆ ಅದು ಪೂಜಾರಿನ ಹೋಗಿ ಯಾವ ತಳಿಯ ಕುರಿ ಮಾಂಸ ಚೆನ್ನಾಗಿರತ್ತೆ ಅಂತ ಕೇಳಿದಂಗೆ ಇರತ್ತೆ. ನನಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನೋದು ಕಟು ಸತ್ಯ, ಆದರೆ ಈ ನಾಡಿನ ಪ್ರಜೆಯಾಗಿ ನನ್ನ ಅನಿಸಿಕೆಗಳನ್ನ ಹೇಳೋದು ಒಳಿತು ಅನ್ನೋ ದೃಷ್ಟಿಯಿಂದ ಈ ಬ್ಲಾಗ್ ಬರಿತ ಇದ್ದೀನಿ.ನನ್ನ ಕೆಲವು ವಿಚಾರಗಳನ್ನ ನಾನು ಪಟ್ಟಿ ಮಾಡಿ ಹೇಳೋದಾದರೆ-
೧). ಚಲನಚಿತ್ರ ನಮಗೆ ಕೇವಲ ಮನರಂಜನೆಯ ಮಾಧ್ಯಮ, ಆದರೆ ಹಲವರಿಗೆ ಅದು ಉದ್ಯಮ, ಹೊಟ್ಟೆಪಾಡು. ಚಲನಚಿತ್ರಗಳ ನಿರ್ಮಾಣ ನಿಂತು ಹೋದರೆ ಎಷ್ಟೋ ಕುಟುಂಬಗಳು ಬೀದಿಗೆ ಬರೋದು ಖಾಯಂ( ನಿರ್ಮಾಪಕರು ಹಾಗು ನಟರನ್ನ ಬಿಟ್ಟು). ಹಾಗಾಗಿ ಇಂದು ಡಬ್ಬಿಂಗ್ ವಿರೋದಿಸುತ್ತಿರುವ ಚಲನಚಿತ್ರ ಕಾರ್ಮಿಕರು ಅವರ ಹಕ್ಕುಗಳಿಗೆ ಹೊರಾಡುತ್ತಿರೋದು  ತಪ್ಪಲ್ಲ ಅನ್ನಿಸುತ್ತೆ.
೨). ಡಬ್ಬಿಂಗ್ ಮಾಡಿದರೆ ನಾವು ಬೇರೆ ಭಾಷೆಯ ಒಳ್ಳೆ ಚಲನಚಿತ್ರಗಳನ್ನ ನಮ್ಮ ಭಾಷೆಯಲ್ಲಿ ನೋಡಿದಂಗೆ ಆಗುತ್ತೆ ಅನ್ನೋದು ಹಲವರ( ಕೆಲವರ) ವಾದ. ಆದರೆ ಕೇವಲ ಡಬ್ಬಿಂಗ್ ಮಾಡಿದರೆ ಮಾತ್ರ ಅವರ ಚಲನಚಿತ್ರಗಳನ್ನ ನೋಡಬೇಕೆ? ಅದನ್ನ ಅದರದೇ  ಭಾಷೆಯಲ್ಲಿ ನೋಡಬಹುದಲ್ಲವ?
೩). ಆಯ್ತು, ಎಷ್ಟೋ ಜನಕ್ಕೆ ಆ ಭಾಷೆ ಬರೋಲ್ಲ ಅಂತೀರಾ? ಬೇರೆ ಭಾಷೆಯ ಒಳ್ಳೆ ಚಲನಚಿತ್ರಗಳನ್ನ ನಮ್ಮ ಭಾಷೆಯಲ್ಲಿ ರೀಮೇಕ್ ಮಾಡಿ ಪ್ರದರ್ಶಿಸಿಲ್ಲವೇ? ಹಾಗೆ ಮಾಡೋಣ, ಮತ್ತೆ ಡಬ್ಬಿಂಗ್ ಏಕೆ ಬೇಕು?
೪). ಇನ್ನೂ ಒಂದು ವಾದ ಅಂದರೆ ಬೇರೆ ಭಾಷೆಯ, ಬಹುಕೋಟಿ ವೆಚ್ಚದ ಸಿನೆಮಾಗಳನ್ನ ನಮ್ಮ ಭಾಷೆಯಲ್ಲಿ ನಿರ್ಮಾಣ ಮಾಡೋದು ಸಾಧ್ಯನೇ ಇಲ್ಲ, ಹಾಗಾಗಿ ಅದನ್ನ ಡಬ್ಬಿಂಗ್ ಮೂಲಕವಾದರೂ ನೋಡೋಣ, ಅಂತಾನ? ಇಲ್ಲಿ ಸ್ವಲ್ಪ ದೀರ್ಘ ಪ್ರತಿವಾದವನ್ನ ಮಂಡಿಸುತ್ತ ಇದ್ದೇನೆ. ಹೋದ ವರ್ಷ ಆಂಗ್ಲ ಭಾಷೆಯ ಒಂದು ಚಲನಚಿತ್ರ ಬಿಡುಗಡೆಯಾಗಿತ್ತು- 2012  ಅನ್ನೋ ಚಲನಚಿತ್ರ. ಎಲ್ಲರು ಅದನ್ನ ಹೊಗಳುತ್ತಾ ಇದ್ದ ರೀತಿ ನೋಡಿ ಬಹಳ ನಿರೀಕ್ಷೆಯಿಂದ ನೋಡಲು ಹೋದರೆ ಅಲ್ಲಿ ಅದರ ಹಿಂದಿ ಡಬ್ಬಿಂಗ್ ಪ್ರದರ್ಶನ ಇತ್ತು. ಸರಿ, ಬಂದಿದ್ದು ಆಯಿತು ನೋಡೋಣ ಅಂತ ಹೋದೆ. ಆದರೆ ಅಲ್ಲಿ ನಿರಾಸೆ ಆಯಿತು ಅನ್ನೋದು ಕಟು ಸತ್ಯ. ಚಿತ್ರ ಚೆನ್ನಾಗಿರಲಿಲ್ಲ ಅಂತಲ್ಲ. ಆದರೆ ಆ ತಾಂತ್ರಿಕತೆ ಹಾಗು ಭಾವನೆಗಳನ್ನ ಒಬ್ಬ ಅಂಗ್ಲ ನಟ ಹಿಂದಿಯಲ್ಲಿ ವ್ಯಕ್ತ ಪಡಿಸುತ್ತಾ ಇದ್ದಾಗ ಹಾಸ್ಯಾಸ್ಪದ ಅನ್ನಿಸುತಿತ್ತು.  ಕೆಲವೊಮ್ಮೆ ಟಿ.ವಿ ಯಲ್ಲಿ ಬರುವ ಕಾರ್ಯಕ್ರಮದಲ್ಲಿ ಸ್ವಲ್ಪ ಏರುಪೇರಾಗಿ, ಶ್ರವಣಕ್ಕೂ ದೃಶ್ಯಕ್ಕೂ ಹೊಂದಾಣಿಕೆ ತಪ್ಪಿದಲ್ಲಿ ನೋಡುವ ನಮಗೆ (ನನಗಂತೂ) ಏನೋ ಆಭಾಸ ಅಥವಾ ಸಿಡುಕ ಉಂಟಾಗುತ್ತೆ ಹಾಗು ಆ ಕಾರ್ಯಕ್ರಮದ ಸವಿಯೇ ಹಾಳಾಗುತ್ತೆ. ಹೀಗಿರುವಾಗ ಆಂಗ್ಲ ನಟ ನಮ್ಮ ಭಾಷೆಯಲ್ಲಿ ಮಾತಾಡೋದನ್ನ ಊಹಿಸೋಕಗುತ್ತ? ಅದು ಚಲನಚಿತ್ರದ ಜೀವ ಸೆಲೆಯನ್ನೇ ಕಿತ್ತು ಎಸೆದಂತಾಗುವುದಿಲ್ಲವ? ಅಲ್ಲಿ ಹಾಸ್ಯ ಹೋಗಿ ಹಾಸ್ಯಾಸ್ಪದ ರಾರಾಜಿಸುತ್ತೆ. ಹಾಗಾಗಿ ಅಂತ ಉತ್ತಮ ಚಿತ್ರಗಳನ್ನ ಹಾಳು ಮಾಡೋ ಬದಲು ಅದರ ಮೂಲತನವನ್ನ ಗೌರವಿಸೋದು ಉತ್ತಮ ಅಲ್ಲವೇ?
೫).ಮಲಯಾಳಂ ಚಿತ್ರವನ್ನ ಕನ್ನಡದಲ್ಲಿ ಡಬ್ ಮಾಡಲಾಗಿದೆ ಅಂತಿಟ್ಟುಕೊಳ್ಳೋಣ, ಅದರಲ್ಲಿ ಅವರು ಆಚರಿಸುವ ಓಣಂ ಹಬ್ಬದ ದೃಶ್ಯ ನಮಗೆ ಏನು ಭಾವನೆಯನ್ನೇ ಉಕ್ಕಿಸೋದಿಲ್ಲ, ಬದಲಾಗಿ ಅದನ್ನೇ ಕನ್ನಡ ಭಾಷೆಯಲ್ಲಿ ಮತ್ತೆ ಚಿತ್ರೀಕರಿಸಿ ಆ ಹಬ್ಬದ ಬದಲಾಗಿ ನಮ್ಮ ಸೊಗಡಿನ ಮಾರಮ್ಮನ ಹಬ್ಬ ತೋರಿಸಿದರೆ ಅದರ ಮಜವೇ ಬೇರೆ ಇರತ್ತೆ. ನಿಮ್ಮ ಮನಸ್ಸಾಕ್ಷಿಯನ್ನ ಕೇಳಿ ಹೇಳಿ- ಹೌದೋ / ಇಲ್ಲವೋ?
೬).ಅದು ಅಲ್ಲದೆ ಇತ್ತೆಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮದವರು ಚಲನಚಿತ್ರ ರಂಗಕ್ಕೆ ಇಳಿದು ಅರ್ಧ ಅಧ್ವಾನ ಮಾಡಿದ್ದಾರೆ, ಅಲ್ಲದೆ ಈಗ ಡಬ್ಬಿಂಗ್ ಗೆ ಅವಕಾಶ ಕೊಟ್ಟರೆ ಬರಿ ಅದನ್ನೇ ಮಾಡಿ ನಮ್ಮ ಚಲನಚಿತ್ರಗಳೇ ಇಲ್ಲದಂತಾಗುವುದು ಬೇಕಾ? ಅದಕ್ಕೆ ನೀವು ಸಮಜಾಯಿಷಿ ಹೇಳಬಹುದು, ಗಟ್ಟಿ ಚಲನಚಿತ್ರಗಳು ಉಳಿದೆ ಉಳಿದುಕೊಳ್ಳುತ್ತವೆ ಇಲ್ಲದವು ಇದ್ದರು ಇರದಿದ್ದಂತೆ ಅಂತ. ಇದಕ್ಕೆ ಸ್ವಲ್ಪ ಬೇರೆ ವ್ಯಾಖ್ಯಾನ ನೀಡುತ್ತ, ಅಲ್ಲ ರೀ, ಮನೆಯಲ್ಲಿ ಕೂತು ಊಟ ಮಾಡೋ ಪದ್ಧತಿ ಈಗ ಬಹಳನೇ ಕಡಿಮೆ ಆಗಿದೆ, ಅದಕ್ಕೆ ಕಾರಣ ಇದಿನ ಫಾಸ್ಟ್ ಫುಡ್ ಗಳು. ಈ ಫಾಸ್ಟ್ ಫುಡ್ ಗಳು ಮೊದಲಿಗೆ ತಲೆ ಎತ್ತಿದಾಗ ಕೆಲವರು ಆತಂಕ ವ್ಯಕ್ತ ಪಡಿಸಿದ್ದು ಉಂಟು. ಆದರೆ ವಿಪರ್ಯಾಸ ಅಂದ್ರೆ ಈಗ ಈ ಫಾಸ್ಟ್ ಫುಡ್ ನಮ್ಮ ದೈನಂದಿನ ಬದುಕಾಗಿದೆ. ಅದು ತಪ್ಪು ಅಂತ ಯಾರಿಗೂ ಈಗ ಅನ್ನಿಸದೆ ಇರಬಹುದು, ಆದರೆ ಇಡಿ ಮನೆಯವರೆಲ್ಲ ಕೂತು ಊಟ ಮಾಡಿದ್ದ ಅನುಭವ ಇದ್ದವರಿಗೆ ಹಾಗು ಇನ್ನೂ ಅದನ್ನ ಪಾಲಿಸಿಕೊಂಡು ಬರುತ್ತಿರುವವರಿಗೆ ಎಲ್ಲೋ ಒಂದು ರೀತಿಯ ನೋವು ಕಾಡುತ್ತಾ ಇರೋದಂತೂ ನಿಜ. ಹಾಗೇನೆ ಇಂದು  ಡಬ್ಬಿಂಗ್ ಚಿತ್ರಗಳು ಮಾಡಲು ಬಿಟ್ಟರೆ ಮುಂದೊಂದು ದಿನ ಇದೆ ರೀತಿ ನಮಗೆ ಅನ್ನಿಸಿದರೆ ( ಯಾಕಂದ್ರೆ ನೈಜ ಕನ್ನಡ ಚಲನಚಿತ್ರಗಳನ್ನ ಅನುಭವಿಸಿರೋ ಕೊನೆಯ ಕೊಂಡಿ ನಾವುಗಳೇ ಆಗಿರುತ್ತೇವೆ) ಅದು ಆಶ್ಚರ್ಯವೇನಲ್ಲ.
ಆದರೆ ಇಲ್ಲಿ ನನ್ನನ್ನ ನಿಜವಾಗಲು ಕಾಡುತ್ತ ಇರೋ ವಿಷಯ ಏನು ಅಂದರೆ, ಈ ಡಬ್ಬಿಂಗ್ ಬೇಕು ಅನ್ನೋ ಮಂದಿಯಲ್ಲಿ ,ಕನ್ನಡ ಅಂದರೆ ಏನು ಮಾಡೋಕು ಸಿದ್ದ ಅನ್ನೋ ಹಲವಾರು ಸ್ನೇಹಿತರೆ ಇರೋದು. ಎಲ್ಲೆಲು ಕನ್ನಡ ರಾರಜಿಸಬೇಕು ಅನ್ನೋದು ನಿಜ, ಆದರೆ ಅದು ನಮ್ಮ ಬುಡವನ್ನ ಕೊಚ್ಚಿ ಅದರ ಮೇಲೆ ನಮ್ಮದಲ್ಲದ ಕನ್ನಡದ ಸೊಬಗನ್ನ ತೋರಿಸೋದಾದರೆ ಅದು ನಮಗೆ ಬೇಕಾ?
ಕನ್ನಡದ ಪ್ರೇಕ್ಷಕನಾಗಿ ನಾನು ಡಬ್ಬಿಂಗ್ ವಿರೋಧಿಸುತ್ತೇನೆ!!!

10 comments:

  1. English to kannada dubbing bagge enu ??

    ReplyDelete
  2. ಅದನ್ನೇ ಕನ್ನಡದಲ್ಲಿ ಪ್ರಶ್ನೆ ಕೇಳಿದ್ದರೆ ಇನ್ನ ಖುಷಿ ಪಡುತ್ತಿದ್ದೆ ಶ್ರೀಮತಿಯವರೇ.
    ಆದರು ನಿಮ್ಮ ಪ್ರಶ್ನೆಗೆ ಉತ್ತರಿಸುತ್ತ, ಡಬ್ಬಿಂಗ್ ವಿರೋದಿಸುತ್ತೇನೆ ಅನ್ನೋದು ಎಲ್ಲ ಭಾಷೆಯಿಂದ ಕನ್ನಡಕ್ಕೆ ಕೂಡ, ಅದು ಆಂಗ್ಲ ಭಾಷೆಗೂ ಅನ್ವಯಿಸುತ್ತೆ.

    ReplyDelete
  3. ರಾಕೇಶ್ ಅವರೇ,

    ಒಳ್ಳೆಯ ವಿಚಾರಗಳನ್ನೇ ಎತ್ತಿದ್ದೀರ.
    ಡಬ್ಬಿಂಗ್ ಮಾಡಬಾರದು ಎಂಬ ಕಟ್ಟಳೆ ಯಾಕೆ ಬೇಕು ಅಂತ ನಂಗೆ ಅರ್ಥ ಆಗಲಿಲ್ಲ.
    ನೀವೇ ಕೊಟ್ಟಂತ ಉದಾಹರಣೆಗಳನ್ನ ನೋಡಿದರೆ, ಜನರಿಗೆ ಎಲ್ಲಾ ಡಬ್ ಮಾಡಲಾದ ಚಿತ್ರಗಳು ಇಷ್ಟವಾಗೋಲ್ಲ ಅನ್ಸುತ್ತೆ.
    ಹಾಗಿದ್ಮೇಲೆ, ಹೆಚ್ಚಿನ ಡಬ್ ಮಾಡಲಾದ ಚಿತ್ರಗಳು ಓಡೋದಿಲ್ಲ. ಇನ್ನು ಚಿತ್ರಗಳನ್ನ ಡಬ್ ಮಾಡೋದರ ಬಗ್ಗೆ ಉದ್ದಿಮೆಯವರಿಗೆ ಕಳವಳ ಯಾಕೆ ಅಂತ ಗೊತ್ತಾಗ್ಲಿಲ್ಲ.

    ಮಲಯಾಳಂ ಚಿತ್ರದ ಒಂದು ಉದಾಹರಣೆ ತಗೊಂಡು, ಅಲ್ಲಿನ ಓಣಂ ಹಬ್ಬದ ಬಗ್ಗೆ ಇಲ್ಲಿನ ಜನರಿಗೆ ಹೆಚ್ಚು ರಿಲೇಟ್ ಮಾಡ್ಕೊಳಕ್ಕೆ ಆಗಲ್ಲ. ಅದನ್ನೇ, ಕನ್ನಡದಲ್ಲಿ ರೀಮೇಕ್ ಮಾಡಿ ತೋರಿಸಿದರೆ ಚೆನ್ನ ಅಂತ ನೀವು ಹೇಳಿದೀರ.
    ಹೌದು. ಒಪ್ಪಬಹುದಾದ ಮಾತು. ಹಾಗಂತ, ಡಬ್ಬಿಂಗ್ ಮೇಲೆ ನಿಷೇಧ ಹೇರದು ಸರಿನಾ? ಅದು ಆಂಟಿ-ಡೆಮಾಕ್ರಟಿಕ್ ಅಲ್ವಾ?
    ಆಮೇಲೆ, ಡಬ್ಬಿಂಗ್ ಬಂದ್ರೆ ರೀಮೇಕ್ ಮಾಡಬಾರದು ಅಂತ ಏನೂ ಕಟ್ಟಳೆ ಬೇಕಾಗಿಲ್ಲ ಅಲ್ವಾ? ರೀಮೇಕ್ ಮಾಡಬೇಕು ಅನ್ಸಿದೊರು, ರೀಮೇಕ್ ಮಾಡ್ಕೊಂಡು ಇರಬಹುದು ಅಲ್ವಾ?

    ಉದ್ದಿಮೆ ಪೂರ್ತಿ ಮುಚ್ಚೆ ಹೋಗುತ್ತೆ, ಉದ್ದಿಮೆ ನಂಬಿಕೊಂಡವರೆಲ್ಲಾ ಬೀದಿಗೆ ಬರ್ತಾರೆ ಅನ್ನೋದು ನಿಜ ಅಂತ ನಂಗೆ ಅನ್ಸಲ್ಲ.
    ಯಾಕಂದ್ರೆ, ತಮಿಳು, ತೆಲುಗು, ಹಿಂದಿ ಚಿತ್ರ ಉದ್ದಿಮೆಗಳು, ಡಬ್ಬಿಂಗ್ ಇದ್ದರೂ ತಾವೇ ಒಳ್ಳೆ ಸಿನೆಮಾಗಳನ್ನ ಮಾಡ್ತಿದಾರೆ.

    ನನಗನ್ಸೋದು, ಡಬ್ಬಿಂಗ್ ಒಳಗೆ ಬಿಟ್ಟು, ರೀಮೆಕಿಗೂ ಅವಕಾಶ ಕೊಟ್ಟು, ನೋಡುಗರಿಗೆ ಬೇಕಾದ್ದು ಅವರೇ ಆಯ್ಕೆ ಮಾಡುವಂತೆ ಇರಬೇಕು.
    ನಿಜವಾದ ಮಾರ್ಕೆಟ್-ಎಕಾನಮಿ ಅದು. ಆಗ, ಒಳಿತೆಲ್ಲವೂ ಉಳಿಯುತ್ತೆ, ಕೊಳಕೆಲ್ಲವೂ ಓಡುತ್ತೆ.

    ReplyDelete
  4. ನಿಮ್ಮ ಅನಿಸಿಕೆಗಳಿಗೆ ನಾನು ಆಭಾರಿ ಪ್ರಿಯಾಂಕ್ ಅವರೇ, ನಿಮ್ಮ ಮಾತನ್ನ ಒಪ್ಪುತ್ತೇನೆ. ಇಲ್ಲಿ ಒಂದು ವಿಷಯವನ್ನ ನಾನು ಸ್ಪಷ್ಟಪದಿಸೋಕೆ ಇಷ್ಟ ಪಡ್ತೇನೆ, ಡಬ್ಬಿಂಗನ್ನ ನಿಷೇಧ ಮಾಡೋ ಕ್ರಮ ಸರಿ ಅಂತ ನಾನು ಹೇಳ್ತಾ ಇಲ್ಲ, ಪ್ರೇಕ್ಷಕನಾಗಿ ಡಬ್ಬಿಂಗ್ ಚಿತ್ರಗಳನ್ನ ನಾನು ವಿರೋಧಿಸುತ್ತೇನೆ. ಅದು ನಮ್ಮ ಸಮ್ಸ್ಕ್ರುಇತ್ಯನ್ನ ಬಿಮ್ಬಿಸೋಲ್ಲ ಅನ್ನೋದು ನನ್ನ ಭಾವನೆ. ಆದರೆ ಅದನ್ನ ಕಟ್ಟಳೆಯ ರೀತಿ ನಿಷೇಧ ಮಾಡೋದು ಎಷ್ಟರ ಮಟ್ಟಿಗೆ ಸರಿ ಅನ್ನೋದು ಸರಿಯಾದ ವಾದಾನೆ. ಡಬ್ಬಿಂಗ್ ಶುರು ಮಾಡಿದರೆ ನಮ್ಮತನದ ಚಿತ್ರಗಳು ಎಲ್ಲಿ ಅವಾಸನಗೊಳ್ಳುತ್ತವೋ ಅನ್ನೋ ಸಹಜ ಕಳವಳ ನನ್ನದು. ಯಾಕಂದರೆ ವಿಶಾಲ ಸ್ವಭಾವದವರಾದ ನಾವು ಸುಲಭಮಾರ್ಗದಲ್ಲಿ ಚಿತ್ರಗಳು ಮಾಡೋ ರೀತಿ ಸಿಕ್ಕರೆ ಕಷ್ಟ ಪಟ್ಟು ಸಿನೆಮಾಗಳನ್ನ ಮಾಡೋ ಗೋಜಿಗೆ ಹೋಗದೆ ಇರೋ ಸಾಧ್ಯತೆಗಳು ಜಾಸ್ತಿ ಅಲ್ಲವೇ? ರೀಮೇಕ್ ಗಳು ಹುಟ್ಟಿದ್ದೇ ಹೀಗೆ ಅಲ್ಲವೇ... ಇನ್ನ ಡಬ್ಬಿಂಗ್ ಗಳು ಬಂದ್ರೆ ಸ್ವಮೇಕ್ ಉಳಿಯತ್ತೆ ಅನ್ನೋ ನಂಬಿಕೆ ಇದೆಯೇ?

    ReplyDelete
  5. ರಾಕೇಶ್ ಅವರೇ,
    ಡಬ್ಬಿಂಗ್ ಪರವಾನಗಿ ಎಂದಾಕ್ಷಣ ೬೦ ರ ದಶಕದ ಫ್ಲ್ಯಾಶ್ ಬ್ಯಾಕ್ ಕಡೆ ನೋಡುವುದು ಅಥವಾ ಕನ್ನಡ ಚಲನಚಿತ್ರ ನಿರ್ಮಾಣವೇ ನಿಂತು ಹೋಗುತ್ತದೆ ಎಂದು ಯೋಚಿಸುವುದು ಎಷ್ಟು ಸರಿ. ನಮ್ಮ ಕಲಾತ್ಮಕ ನಿರ್ದೇಶಕರುಗಳು, ನಿರ್ಮಾಪಕರುಗಳು, ಸಂಗೀತ ರಚನಾಕಾರರು, ನಟನಟಿಯರು ಅಷ್ಟೊಂದು ಅಶಕ್ತರೇ.? ಈಗ ಅವರಲ್ಲಿರುವ ಸವಾಲನ್ನು ಸ್ವೀಕರಿಸುವ ತಾಕತ್ತು ಡಬ್ಬಿಂಗ್ ಬಂದ ಮೇಲೆ ಮಾಯವಾಗುವುದೇ.? ಇಷ್ಟಕ್ಕೂ ಪರಭಾಷೆಯ ಎಲ್ಲ ಚಿತ್ರಗಳು ಡಬ್ ಆಗುತ್ತವೆ ಅಥವಾ ಡಬ್ ಆದ ಎಲ್ಲ ಚಿತ್ರಗಳು ಓಡುತ್ತವೆ ಅಂಥ ಊಹಿಸುವುದು ತಪ್ಪಲ್ಲವೇ.? ಪ್ರೇಕ್ಷಕ ಆಗಲೂ ಮಣೆ ಹಾಕುವುದು ಒಳ್ಳೆ ಅಭಿರುಚಿಯುಳ್ಳ ಚಿತ್ರಗಳಿಗೆ ಮಾತ್ರ. ಹೀಗಾದಾಗ ನಮ್ಮವರಲ್ಲಿ ಕ್ರೀಯಾಶೀಲತೆ ಮತ್ತು ಗೆಲ್ಲಬೇಕೆನ್ನುವ ಛಲ ಇನ್ನೂ ಹೆಚ್ಚಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳಿಗೆ ನಾಂದಿ ಹಾಡುತ್ತದೆ. ನಿಂತ ನೀರಾಗಿರುವ ಚಿತ್ರರಂಗದಲ್ಲಿ ಹೊಸ ಉದ್ಯಮವೊಂದು ಬೆಳೆದು ಹೊಸ ಹೊಸ ತಂತ್ರಜ್ನಾನ ಮತ್ತು ವಿಸ್ಮಯಗಳಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತದೆ. ತರುವಾಯ ವಾರದಲ್ಲಿ ಸಿನಿಮಾ ಮಾಡಿ ಸಬ್ಸಿಡಿ ತೊಗೊಂಡು ವಾರಕ್ಕೆ ಎತ್ತಂಗಡಿಯಾಗುವಂಥ ಚಿತ್ರಗಳ ಸಂಖ್ಯೆ ಕಡಿಮೆಯಾಗಿ ಪ್ರತಿಶತ ಗೆಲ್ಲುವ ಕನ್ನಡ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತದೆ. ಹೀಗೆ ಚಿತ್ರರಂಗದಲ್ಲಿ ಉದ್ಯಮಶೀಲತೆ ಬೆಳೆದಂತೆ ಅದರ ಜೊತೆ ಜೊತೆಗೆ ಕನ್ನಡ, ಮನರಂಜನೆ, ಕಲಾವಿದರೂ ಎಲ್ಲರೂ ಬೆಳೆಯುತ್ತಾರೆ.

    ReplyDelete
  6. ನಿಮ್ಮ ನಿಲುವು ತೋರಿಸಿದ್ದಕ್ಕೆ ಧನ್ಯವಾದ.
    'ಡಬ್ಬಿಂಗ್ ಬಂದ್ರೆ ಸ್ವಮೇಕ್ ಉಳಿಯುತ್ತೆ ಅನ್ನೋ ನಂಬಿಕೆ ಇದೆಯಾ?' ಅಂತ ಕೇಳಿದೀರಾ.
    ಈಗಾಗಲೇ ಡಬ್ಬಿಂಗ್-ಗೆ ಅವಕಾಶ ಕೊಟ್ಟಿರೋ ಉದ್ದಿಮೆಗಳು, ಸ್ವಂತವಾಗಿ ಒಳ್ಳೆ ಚಿತ್ರಗಳನ್ನ ಮಾಡ್ತಿರೋ ಬಗ್ಗೆ ನಾನು ಹೇಳಿದ್ದೆ.
    ಅದನ್ನೇ ಉದಾಹರಣೆಯಾಗಿ ತಗೊಂಡು, ಕನ್ನಡದಲ್...ಲೂ ಡಬ್ಬಿಂಗ್ ಬಂದ್ರೆ ಸ್ವಮೇಕ್ ಇರುತ್ತೆ ಅಂತ ಹೇಳಬಲ್ಲೆ.

    ಡಬ್ಬಿಂಗ್ ಬಂದ್ರೆ, ಸ್ವಲ್ಪ ದಿನಗಳು ಬರೀ ಡಬ್ ಆದ ಚಿತ್ರಗಳೇ ಬರಬಹುದು. 'ಹೀಗಾಗಬಹುದು' ಅನ್ನೋದನ್ನ ನಾನು ತಳ್ಳಿ ಹಾಕ್ತಿಲ್ಲ.
    ಆದರೆ, ನಿಮ್ಮ ಬ್ಲಾಗಿನಲ್ಲಿ ನೀವು ಕೊಟ್ಟ ಕೆಲವು ಉದಾಹರಣೆಗಳನ್ನೇ ನೋಡಿದರೆ, ಡಬ್ಬಿಂಗ್ ಚಿತ್ರ ಹೆಚ್ಚಿನ ಜನರಿಗೆ ಇಷ್ಟವಾಗೋಲ್ಲ ಅನ್ನೋದು ಗೊತ್ತಾಗತ್ತೆ. ಹೆಚ್ಚಿನ ಡಬ್ ಚಿತ್ರಗಳು ಕುಸೀತವೆ, ಕೆಲವು ಮಾತ್ರ ಓಡ್ತವೆ. ಆಗ, ಸ್ವಮೇಕ್ ಮಾಡಿ ಹೆಚ್ಚಿನ ದುಡ್ಡು ಮಾಡಬಹುದು ಅನ್ನೋದು ಎಲ್ರಿಗೂ ಕಂಡು ಬರುತ್ತೆ. ಇದೇ ದಿಟ ಇವತ್ತು ತೆಲುಗು, ತಮಿಳು, ಹಿಂದಿ ಚಿತ್ರ ಉದ್ದಿಮೆದಾರರು ಕಂಡುಕೊಂಡಿದಾರೆ.
    ಹಂಗಾಗಿ, ಅಲ್ಲಿ ಸ್ವಮೇಕ್ ಚಿತ್ರಗಳೂ ಡಬ್ ಆದ ಚಿತ್ರಗಳಷ್ಟೇ ಇರುತ್ವೆ.

    ReplyDelete
  7. ಮಹೇಶ್ ಅವರೇ, ಮೊದಲನೆಯದಾಗಿ ನಿಮ್ಮ ಸಮಯಕ್ಕಾಗಿ ನನ್ನ ವಂದನೆಗಳು. ನೀವು ಹೇಳಿದ ಹಾಗೆ ಹೆದುರುವ ಅವಶ್ಯಕತೆಗಿಂತ, ಹೆದರದೆ ಬಾಳುವುದು ದೊಡ್ಡ ಸವಾಲಾಗಿದೆ. ಎಲ್ಲರಿಗು ತಿಳಿದಿರುವ ಹಾಗೆ, ನಮ್ಮ ಸಿನಿಮಾ ಉದ್ಯಮ ತೆಲುಗು, ತಮಿಳಿನಂತೆ ದೊಡ್ಡ ಗಾತ್ರ ಅಥವಾ ವಿಸ್ತಾರವನ್ನ ಹೊಂದಿಲ್ಲ. ನಮಗೆ ಸೀಮಿತ ಪ್ರೇಕ್ಷಕ ವರ್ಗವಿರೋದು ನಿಜ. ಅಲ್ಲದೆ ಸದಭಿರುಚಿಯ ಚಿತ್ರ ಬಂದರೆ ಯಾವುದೇ ಭಾಷೆಯನ್ನಾದರೂ ನೋಡೋ ಸತ್(?)ಪ್ರಜೆಗಳು ನಮ್ಮವರು. ಹೀಗಿರೋವಾಗ, ಡಬ್ಬಿಂಗ್ ಸಿನಿಮಾಗಳು ದಾಳಿ ಇಟ್ಟರೆ ನಮ್ಮ ವಿಸ್ತಾರ ಮತ್ತಷ್ಟು ಕಡಿಮೆ ಆಗೋದಿಲ್ಲವೇ? ಯಾಕಂದರೆ ಕನ್ನಡದಲ್ಲಿ ಡಬ್ ಮಾಡಬಹುದು ಎಂದು ತಿಳಿದರೆ ತಮಿಳು ಮತ್ತು ತೆಲುಗು ನಿರ್ಮಾಪಕರು ಈಗ ಮದುತ್ತಿರೋದಕ್ಕಿಂತ ಹೆಚ್ಚಿನ ದುಡ್ಡನ್ನ ಬಾಚೋದಂತು ಗ್ಯಾರಂಟೀ. ಹಾಗಾಗಿ ನಮ್ಮ ಪ್ರೇಕ್ಷಕರನ್ನ ದೃಷ್ಟಿಯಲ್ಲಿಟ್ಟುಕೊಂಡು ಅವರು ಸಿನಿಮಾ ಮಾಡಿದರೆ, ನಮ್ಮ ಉದ್ಯಮದಲ್ಲಿ ನಮಗೋಸ್ಕರ ಅದನ್ನ ಮಾಡೋವವರ ಸಂಖ್ಯೆ ಕಡಿಮೆ ಆಗೇ ಆಗುತ್ತೆ. ನನಗೆ ನಷ್ಟ ಆಗುತ್ತೆ ಅಂತ ಗೊತ್ತಿದ್ದೂ ನಮ್ಮ ಯಾವ ನಿರ್ಮಾಪಕ ತಾನೇ ರಜನಿಕಾಂತ್ ನಂತ ನಟನ ಸಿನಿಮಾ ಕನ್ನಡ ಡಬ್ ಬಂದಾಗ ಬಂದವಳ ಹಾಕಿ ಸಿನಿಮಾ ಮಾಡ್ತಾನೆ? ನಮ್ಮವರು ಅಶಕ್ತರು ಅಂತಲ್ಲ, ಉದ್ಯಮದವರು ಮದದಳು ಅಸಮರ್ಥರು ಅಂತಲ್ಲ, ಬದಲಾಗಿ ನಮ್ಮ ಪ್ರೇಕ್ಷಕರು ಚಂಚಲರು. ಸುದೀಪ್ ನಂತ ನಟ ಕಷ್ಟ ಪಟ್ಟು ಜಸ್ಟ್ ಮಾತ್ ಮಾತಲ್ಲಿ ಅನ್ನೋ ಸ್ವಮೇಕ್ ಸಿನಿಮಾ ಮಾಡಿದ್ರೆ ನೋಡೋಲ್ಲ, ಅದೇ ಕೆಂಪೇಗೌಡ ಮಾಡಿದ್ರೆ ಹುಚ್ಚೆದ್ದು ನೋಡ್ತಾರೆ. ಹಾಗಾಗಿ ಕ್ರಿಯಾಶೀಲತೆ ಇರೋ ಸುದೀಪ್ ಕೂಡ ಜನ ಬಯಸುತ್ತ ಇರೋದು ರೀಮೇಕ್ ಅನ್ನೋದನ್ನ ಗ್ರಹಿಸಿ ಅದನ್ನೇ ಮಾಡ್ತಾರೆ. ಅವರಿಗೆ ಶಕ್ತಿ ಇಲ್ಲ ಅಂತ ಅರ್ಥಾನ? ಅಲ್ಲ, ಅವರು ಪ್ರೇಕ್ಷಕನ ಚಂಚಲತೆಯನ್ನ ಒಪ್ಪಿಕೊಳ್ತಾ ಇದ್ದಾರೆ. ಇದೆ ರೀತಿ ಒಮ್ಮೆ ಡಬ್ಬಿಂಗ್ ಮಾಡೋ ಪ್ರವೃತ್ತಿ ಬಂದು ಬಿಟ್ಟರೆ, ಎಲ್ಲರು ಅದನ್ನೇ ಮಾಡೋಕೆ ಶುರು ಮಾಡ್ತಾರೆ. ಹಿಂದಿ, ತಮಿಳು, ತೆಲುಗು ಉದ್ಯಮಗಳಿಗೆ ಅಷ್ಟಾಗಿ ಹೊಡೆತ ಬೀಳೋಲ್ಲ ಯಾಕಂದ್ರೆ ಅವರ ಪ್ರೇಕ್ಷಕ ವರ್ಗ ದೊಡ್ಡದು. ನಮ್ಮದು ಚಿಕ್ಕ ಪ್ರೇಕ್ಷಕ ವರ್ಗ. ಇದರ ಬದಲಾಗಿ ಅಲಿಖಿತ ನಿಷೇಧ ಅನ್ನೋ ಪದದಿಂದ ಅವರನ್ನ ಒಳ್ಳೆ ಸ್ವಮೇಕ್ ಪ್ರಯತ್ನಗಳತ್ತ ಹೊರಲಿಸೋ ಪ್ರಯತ್ನ ಮಾಡೋದರಲ್ಲಿ ತಪ್ಪಿದೆಯ?

    ReplyDelete
  8. ಪ್ರಿಯಾಂಕ್ ಅವರೇ, ನಮ್ಮ ಚಿತ್ರರಂಗದಲ್ಲಿ ಕೇವಲ ಡಬ್ಬಿಂಗ್ ಸಮಸ್ಯೆ ಒಂದೇ ಇಲ್ಲವಲ್ಲ, ಈಗಲೇ ನಮ್ಮ ಚಿತ್ರಗಳಿಗೆ ಚಿತ್ರಮಂದಿರಗಳು ಇಲ್ಲ, ಇನ್ನ ಡಬ್ಬಿಂಗ್ ದಾಳಿ ಇಟ್ಟರೆ ನಮ್ಮ ಚಿತ್ರಗಳಿಗೆ ಮನೆ ಹಾಕುತ್ತಾರೆ ಅನ್ನೋ ನಂಬಿಕೆ ಇದೆಯಾ? ರಜನಿಕಂಥ ಅಥವಾ ಚಿರಂಜೀವಿ ಚಿತ್ರ ಬಿಡುಗಡೆಯಾದರೆ ನಮ್ಮ ಚಿತ್ರಮಂದಿರ ಮಾಲೀಕರು ಓಡುತ್ತಾ ಇರೋ ಚಿತ್ರಗಳನ್ನೇ ಕಿತ್ತು ಹಾಕ್ತಾರೆ, ಇನ್ನ ಅದೇ ಎಲ್ಲ ಸಿನೆಮಾಗಳನ್ನ ಕನ್ನಡೀಕರಿಸಿ ಬಿಡುಗಡೆ ಮಾಡಿದರೆ ಶುದ್ಧ ಕನ್ನಡ ಚಿತ್ರಗಳಿಗೆ ಜಾಗ ಸಿಗೋ ನಂಬಿಕೆ ಖಂಡಿತ ಇಲ್ಲ. ಹಾಗಾಗಿ ಈ ಡಬ್ಬಿಂಗ್ ಸಮಸ್ಯೆ ಕೇವಲ ಮೇಲ್ನೋಟಕ್ಕೆ ಕಣೋ ಅಷ್ಟು ಸಲೀಸಿಲ್ಲ ಮತ್ತು ನಾವುಗಳು ಬಹುಶ ಅರ್ಥ ಮಾಡಿಕೊಳ್ಳೋಕೆ ಆಗದೆ ಇರೋ ಅಂಶಗಳು ಬಹಳಷ್ಟು ಇವೆಯೋ ಏನೋ? ಹಾಗಾಗಿ ನಾವು ಎಷ್ಟರ ಮಟ್ಟಿಗೆ ಇದನ್ನ ವಿರೋದಿಸೋದರಲ್ಲಿ ಅಥವಾ ಪರ ವಹಿಸುವುದರಲ್ಲಿ ಸರಿ ಅನ್ನೋದು ದೊಡ್ಡ ಪ್ರಶ್ನೆ...

    ReplyDelete
  9. ರಾಕೇಶ್ ಅವರೇ,
    ನಿಮ್ಮ ಕಾಳಜಿ ಮೆಚ್ಚುವಂತಾದ್ದೆ.
    ನೀವು ಹೇಳಿದಂತ ಸ್ಟಾರ್-ಗಳ ಸಿನೆಮಾಗಳು ಯಾವುದೇ ಬಂದರೂ, ಇವತ್ತೂ ಅದೇ ಸ್ಥಿತಿ ಇದೆ.
    ಅವರ ಸಿನೆಮಾಗಳು ಬರುವಾಗ, ಕನ್ನಡ ಸಿನೆಮಾಗಳು ಬಿಡುಗಡೆಯಾಗೋಲ್ಲ. ಥಿಯೇಟರ್-ಗಳು ಅವರ ಸಿನೆಮಾಗಳಿಗೆ ಮಣೆ ಹಾಕ್ತಾವೆ.
    ಕನ್ನಡಿಗರು, ಆ ಸಿನೆಮಾಗಳನ್ನ ಅದೇ ಭಾಷೆಯಲ್ಲಿ ನೋಡ್ತಾರೆ. ಒಂದೆರಡು ಸಿನೆಮಾ ನೋಡೋ ಹೊತ್ತಿಗೆ, ಕನ್ನಡಿಗರು ಆ ಬಾಷೆ ಅರ್ತ ಮಾಡ್ಕೊಳೋ ಮಟ್ಟಿಗೆ ಕಲಿತಿರ್ತಾರೆ.
    ಮೊದ ಮೊದಲು, ಗಡಿನಾಡುಗಳಲ್ಲಿ ಓಡ್ತಿದ್ದ ಬೇರೆ ಬಾಷೆ ಸ್ಟಾರ್ ಸಿನೆಮಾಗಳು, ಈಗ ಒಳನಾಡುಗಳಲ್ಲೂ ಚೆನ್ನಾಗಿ ಓಡ್ತಿವೆ. ಅಲ್ಲದೇ, ಇತರೆ ತಮಿಳು/ತೆಲುಗು ಸಿನೆಮಾಗಳಿಗೂ ಒಂದು ಮಾರುಕಟ್ಟೆ ಒಳನಾಡುಗಳಲ್ಲಿ ಬೆಳೆಸೋದಿಕ್ಕೆ ಇದು ಕಾರಣವಾಗ್ತಿದೆ.
    ಡಬ್ಬಿಂಗ್ ಬ್ಯಾನ್ ಇದ್ದರೂ, ಈ ಸ್ಥಿತಿ ತಲುಪಿರೋದ್ರಿಂದ, ಡಬ್ಬಿಂಗ್ ಬಂದ ಮೇಲೆ ಈ ಸ್ಥಿತಿ ಬರುತ್ತೆ ಅನ್ನೋದು ತಪ್ಪಾಗುತ್ತೆ.

    ಇದಕ್ಕೆಲ್ಲಾ ಕಾರಣ ನಾವು ಕನ್ನಡಿಗರು ತಗೊಂಡಿರೋ 'protectionist' ಹೆಜ್ಜೆಗಳು.
    'Protectionism protects nobody' ಅನ್ನೋದನ್ನ ನಾವು ಅರ್ತ ಮಾಡ್ಕೊಬೇಕಾಗಿದೆ.
    ನೋಡುಗರಿಗೆ ಬೇಕಾದ್ದನ್ನ ಅವರೇ ಆಯ್ಕೆ ಮಾಡಬೇಕು. ಅದನ್ನೇ 'ಮಾರ್ಕೆಟ್ ಎಕಾನಮಿ' ಅನ್ನೋದು. 'ಮಾರ್ಕೆಟ್ ಎಕಾನಮಿ'ಗೆ ತೆರೆದುಕೊಂಡಮೇಲೆ, ನಮ್ಮ ದೇಶದಲ್ಲಾಗಿರೋ ಬದಲಾವಣೆಗಳನ್ನ ನೀವು ನೋಡಿರ್ತೀರ. "ಮಾರುಕಟ್ಟೆ ತೆರೆದುಕೊಂಡಮೇಲೆ, ನಮ್ಮಲ್ಲಿನ ಉದ್ದಿಮೆದಾರರೆಲ್ಲಾ ಬಾಗಿಲು ಹಾಕ್ಕೊಂಡ್ ಹೋಗ್ತಾರೆ, ಎಲ್ಲಾ ಹೊರದೇಶದೋರು ಕೊಳ್ಳೆ ಹೊಡೀತಾರೆ" ಅನ್ನೋ ಮಾತು ೧೯೯೧ಕ್ಕಿಂತ ಮುಂಚೆ ಕೇಳಿ ಬರ್ತಿತ್ತು. ಆದರೆ, ಮಾರುಕಟ್ಟೆ ತೆರೆದುಕೊಂಡಮೇಲೆ, ನಮ್ಮ ಜನರಿಗೆ ಹೆಚ್ಚಿನ ಒಳಿತೇ ಆಗಿದೆ. ಉದ್ದಿಮೆದಾರರು ಒಳ್ಳೆ ವಹಿವಾಟು ನಡೆಸ್ತಿದಾರೆ, ಹೊರದೇಶದಲ್ಲೂ ವಹಿವಾಟು ನಡೆಸುವಂತೆ ಆಗಿದಾರೆ.
    ನಮ್ಮ ಕನ್ನಡ ಚಿತ್ರ ಉದ್ದಿಮೆಯೂ ಇದೇ ರೀತಿ ಮಾರುಕಟ್ಟೆಗೆ ತೆರೆದುಕೊಂಡರೆ, ಇನ್ನೂ ಗಟ್ಟಿಗವಾಗುತ್ತೆ, ಬಡವಾಗೊಲ್ಲ.

    ReplyDelete
  10. ಪ್ರಿಯಾಂಕ್- ನಿಮ್ಮ ನಿಲುವನ್ನು ಅಕ್ಷರಶಃ ಒಪ್ಪುತ್ತೇನೆ. ಯಾವುದೇ ಒಂದು ಚರ್ಚೆಗೆ ಒಂದು ತಾರ್ಕಿಕ ಅಹಂ ಅನ್ನೋದು ಇರತ್ತೆ. ನಾನು ಪರ ವಹಿಸಿದ್ದೇನೆ, ಅಥವಾ ವಿರೋಧಿಸುತ್ತಿದ್ದೇನೆ ಹಾಗಾಗಿ ನಾನು ಅದಕ್ಕೆ ಬದ್ದನಾಗೆ ಇರಬೇಕು ಮತ್ತು ಯಾವುದೇ ಕಾರಣಕ್ಕೂ ಸೋಲಬಾರದು ಅನ್ನೋ ಅಹಂ ಅದು. ಇಲ್ಲಿ ನಾನು ನನ್ನ ತಾರ್ಕಿಕ ಅಹಂ ಅನ್ನು ಬಿಟ್ಟು ನಿಮ್ಮ ಪ್ರತಿಕ್ರಿಯೆಯನ್ನ ಓದಿದರೆ ಕಂಡಿತ ಅದಕ್ಕೆ ಎದುರಾಡಲು ವಿಷಯ ಸಿಗೋಲ್ಲ. ನೀವು ಉಲ್ಲೇಖಿಸಿರೋ " ಮಾರ್ಕೆಟ್ ಎಕಾನಮಿ" ಸರಳವಾಗಿ ಒಪ್ಪುವಂತದ್ದೆ. ಆದರೆ ಇಲ್ಲಿ ನನ್ನ ನಿಲುವನ್ನು ಬದಲಾಯಿಸಿಕೊಳ್ಳಲು ಕಷ್ಟ ಆಗ್ತಾ ಇರೋ ಕರಣ ಅಂದರೆ ನಮ್ಮ ನೀತಿ ಮತ್ತು ನಿಯಮಗಳ ಮೇಲಿನ (ಅಪ)ನಂಬಿಕೆ. ಈಗ ನೀವು ಹೇಳಿದ ಹಾಗೆ ಡಬ್ಬಿಂಗ್ ಮಾಡಲು ಬಿಟ್ಟು ನೋಡಿದ್ವಿ ಅಂತಿಟ್ಟುಕೊಳ್ಳೋಣ. ಆಗ ಡಬ್ಬಿಂಗ್ ನಿಂದ ಭಾಷೆಗೆ ಹಾನಿ ಉಂಟಾಗೋ ಪರಿಸ್ಥಿತಿ (ಎಷ್ಟೋ ಅಂಗ್ಲ ಪದಗಳನ್ನ ಕನ್ನಡೀಕರಿಸಿದರೆ ಉಂಟಾಗೋ ಸರಳ ಅಪಹಾಸ್ಯ ಹಾಗು ಕೆಟ್ಟ ಪದ ಪ್ರಯೋಗ) ಬಂದೋ ಅಥವಾ ಎಲ್ಲ ಕೆಟ್ಟ ಹಾಗು ಒಳ್ಳೆಯ ಅನ್ನೋ ಬೇಧ ಇಲ್ಲದೆ ನುಗ್ಗೋ ಡಬ್ಬಿಂಗ್ ಹಾವಳಿಯಿಂದನೋ ಬೇಸತ್ತು ನಾವು ನಿಯಮವನ್ನ ಮುರಿದು ಮತ್ತೆ ನಿಷೇಧ ಮಾಡಲು ಆಗುತ್ತಾ? ಖಂಡಿತ ಇಲ್ಲ. ಯಾಕಂದ್ರೆ ನಮ್ಮ ಸಂವಿಧಾನ ಶಿಲ್ಪಿ ಸಂವಿಧಾನ ಮಾಡಿಟ್ಟು ಹೇಳಿದ ಒಂದು ಮತ್ತೆ ಇಂದು ಪರಿಪಾಲಿಸಲು ಆಗುತ್ತಿಲ್ಲ, ಮಾತು ಯಾರಿಗೂ ಅದನ್ನ ಸರಿಪಡಿಸಿ ಮುಂದೆ ಹೋಗೋ ಧೈರ್ಯ ಇಲ್ಲ. ಹೀಗಿರೋವಾಗ ಡಬ್ಬಿಂಗ್ ನೀತಿ ನಿಯಮಗಳು ನಿಲ್ಲುತ್ತವ? ನಿಮ್ಮ ಮಾತನ್ನು ಒಪ್ಪುತ್ತ ಡಬ್ಬಿಂಗ್ ಗೆ ಅವಕಾಶ ನೀಡಿದರೆ ನಿಯಮಗಳು ಪರಿಪಾಲನೆ ಆಗೋದು ಕಡಿಮೆ. ಹಾಗಂತ ಅವಕಾಶ ಕೊಟ್ಟು ನೋಡೋದು ಬೇಡ ಅಂತಲ್ಲ. ಕೊಡೋಣ, ಆದರೆ ಅದಕ್ಕೂ ಮೊದಲು ನಮ್ಮ ನಿಯಮಗಳು ( ರೀಮೇಕ್ ಹಾಗು ಪರಭಾಷಾ ಚಿತ್ರ ಬಿಡುಗಡೆ ಹಾಗು ಚಿತ್ರಮಂದಿರ ಸಮಸ್ಯೆ ) ತಿದ್ದುಪಡಿ ಮಾಡಿಕೊಂಡು ಮುಂದೆ ಹೋಗೋಣ. ಹೀಗೆ ಏಕಾಏಕಿ ಡಬ್ಬಿಂಗ್ ಬೇಕು, ಅಷ್ಟೇ ಅನ್ನೋರು ಬಹಳ ಇದ್ದಾರೆ ( ನೀವು ಚರ್ಚೆಯ ಕೊಂಡಿಯನ್ನ ನೋಡಿದರೆ, ಕೆಲವರು ಮಾತ್ರ ತಾರ್ಕಿಕ ಅಂಶಗಳನ್ನ ಹೇಳ್ತಾ ಇದ್ದಾರೆ, ಇನ್ನ ಹಲವರು ಕೇವಲ ಇದು ಆಗ್ಬೇಕು ಅಂದ್ರೆ ಆಗ್ಬೇಕು ಅಷ್ಟೇ ಅನ್ನೋ ಭಾವೊದ್ರೆಕದಿಂದ ಹೇಳೋ ಹಾಗಿದೆ). ನೀವು ಮತ್ತು ನಿಮ್ಮಂತ ಸಮಾನ ಮನಸ್ಕರು ಕೂತು, ಉದ್ಯಮದವರಿಗೆ ಇದರ ಉಪಯೋಗಗಳನ್ನ ಮತ್ತು ಇದನ್ನ ಅನುಷ್ಟಾನಕ್ಕೆ ತರೋದಕ್ಕೆ ಮುನ್ನ ಮಾಡ್ಕೊಬೇಕಾದ ತಯಾರಿನ ಸವಿವರವಾಗಿ ಹೇಳಿದಲ್ಲಿ ಒಂದು ಬದಲಾವಣೆಯನ್ನ ಕಾಣಬಹುದು. ಏಕಾಏಕಿ ಆತುರದ ನಿರ್ಧಾರ ಬೇಡ ಅನ್ನೋದಷ್ಟೇ ನನ್ನ ಆಸೆ. ನಿಮ್ಮ ನಿಳುವಿಗಿ ನಾನ ಬೆಂಬಲ ಕೊಡೋಕೆ ಯಾವುದೇ ಅಭ್ಯಂತರ ಇಲ್ಲ, ಆದರೆ ಅಲ್ಲಿಯವರೆಗೂ ನಾನು ವಿರೋಧಿಸುತ್ತೇನೆ.:-)

    ReplyDelete