"೨೦ ಜನರನ್ನ ನನಗೆ ಕೊಡಿ, ನಾನೇ ಕಸ ವಿಲೇವಾರಿ ಮಾಡುತ್ತೇನೆ " ಆಧುನಿಕ ಸುಭಾಷ್ ಚಂದ್ರ ಬೋಸ್ ರ ರೀತಿಯಲ್ಲಿ ಗುಡುಗಿರೋದು ನಮ್ಮ ಘನತೆವೆತ್ತ ರಾಜ್ಯಪಾಲರು.
"ಈಶಾನ್ಯ ರಾಜ್ಯಗಳ ಜನರನ್ನ ಮರಳಿ ಬೆಂಗಳೂರಿಗೆ ಬರುವಂತೆ ಕರೆ ಕೊಡಲು ಅಸ್ಸಾಂಗೆ ತೆರಳುವೆ" ಎಂದು ತುದಿಗಾಲಲ್ಲಿ ನಿಂತಿರುವ ಮಾನ್ಯ ಗೃಹ/ಉಪಮುಖ್ಯಮಂತ್ರಿಗಳು.
"ಲಕ್ಷ ರೂಪಾಯಿ/ ಘಂಟೆಗೆ ಸಾವಿರ ರೂಪಾಯಿ ಕೊಟ್ಟರೂ ಸರ್ಕಾರಿ ಕೆಲಸಕ್ಕೆ ವೈದ್ಯರು ಬರುತ್ತಿಲ್ಲ" ಅಂತ ವಿವೇಚನೆ ಇಲ್ಲದೆ (ಲಕ್ಷ ರೂಪಾಯಿ ಇರಲಿ ಸ್ವಾಮಿ ೫೦-೫೫ ವರ್ಷ ವಯಸ್ಸಿನ,ಈಗಲೂ ರಾತ್ರಿ ಪಾಳ್ಯದಲ್ಲಿ ಕರ್ತವ್ಯ ಮಾಡುವ ಹಿರಿಯ ವೈದ್ಯರ ಮೂಲ ವೇತನ ಈಗಲೂ ಕೂಡ ೪೦,೦೦೦ ಮುಟ್ಟಿಲ್ಲ ಅನ್ನೋದು ತಿಳಿದಿದೆಯೋ ಇಲ್ಲವೋ ) ಹೇಳಿಕೆ ಕೊಡೊ ಮಾನ್ಯ ಆರೋಗ್ಯ ಸಚಿವರು.
ಇಂತಿಪ್ಪ ಘನತೆವೆತ್ತವರ ಮಧ್ಯ ನರಳುತ್ತ ಇರೋದು ಮಾತ್ರ ಶ್ರೀಸಾಮಾನ್ಯ. ಆದರೆ ದಪ್ಪ ಚರ್ಮದ ಶ್ರೀಸಾಮಾನ್ಯನಿಗೆ ಪರಿಸ್ಥಿತಿ ಕುತ್ತಿಗೆವರೆಗೂ ಬರೋವರೆಗೋ ಇದ್ಯಾವುದರ ಆಳ-ಹಗಲಗಳ ಅರಿವು ಇರೋದೇ ಇಲ್ಲ. ಪ್ರತಿ ದಿನ ಬೆಳಗ್ಗೆ ಎದ್ದು ಕೆಲಸಗಳಿಗೆ ಓಡಿ ಹೋಗಿ ಸಂಜೆ ಬಂದು ಹೊದ್ದು ಮಲಗುವ ಮಧ್ಯ ಸುತ್ತಮುತ್ತ ಏನಾಗಿದೆ ಅನ್ನೋ ಗೊಡವೆಗೆ ಹೋಗದೆ ಇದ್ದರೆ ಅದೇ ತಾನು ಮಾಡೋ ಜೀವನೋತ್ಪನ್ನ ಕಾರ್ಯ ಅನ್ನೋ ಸಂತೃಪ್ತ ಭಾವ. ಆದರೆ ಸಮಯ ಕೈ ಮೀರಿ ಹೊಗೊಮುಂಚೆ ಕನಿಷ್ಠ ಪಕ್ಷ ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳೋ ಯೋಚನೆ-ಯೋಜನೆಗಳನ್ನ ಹಾಕಿಕೊಳ್ಳದಿದ್ದರೆ " ವೈದ್ಯೋ ನಾರಾಯಣೋ ಹರಿಃ "( ನಾರಾಯಣ ಸಮನಾದ ವೈದ್ಯನೋರ್ವ ನಮ್ಮ ನೋವುಗಳನ್ನ ನಿವಾರಿಸುತ್ತಾನೆ) ಕೂಡ ಕೈಕಟ್ಟಿ ಕೂರುವಂತಾಗೋದು ದೂರದಲ್ಲಿಲ್ಲ.
ಈ " ವೈದ್ಯೋ ನಾರಾಯಣೋ ಹರಿಃ "ಮಾತನ್ನ ರೂಡಿಗೆ ತಂದವರು ಬಹುಶ ನಾರಾಯಣನಿಗೆ ಕಾಯಿಲೆ ಬರುತ್ತೋ ಇಲ್ಲವೋ ಅನ್ನೋ ಕಲ್ಪನೆಯನ್ನ ಮಾಡಿರಲಿಕ್ಕಿಲ್ಲ. ಹೌದು!!! ವೈದ್ಯರಿಗೆ ಖಾಯಿಲೆಗಳು ಬರಲ್ವ? ಬರ್ತವೆ ಸ್ವಾಮಿ, ಜನಸಾಮಾನ್ಯರಿಗಿಂತ ಸ್ವಲ್ಪ ಜಾಸ್ತಿನೆ ಅನ್ನಿಸೋವಷ್ಟು ಖಾಯಿಲೆಗಳಿಗೆ ತುತ್ತಾಗೋ ವೃತ್ತಿ ನಮ್ಮದು. ರೋಗಿಗೆ ಬರುವ ಪ್ರತಿಯೊಂದು ರೋಗವು ಕೂಡ (ಅದರಲ್ಲೂ ಸಾಂಕ್ರಾಮಿಕವಾಗಿ ಹರಡುವ ರೋಗಗಳು) ವೈದ್ಯನನ್ನ ಚುಂಬಿಸಿ ಹೋಗೋ ಸಾಧ್ಯತೆಗಳು ಅಪಾರ. ಹೀಗೆ ಏಕಾಏಕಿ ಎಲ್ಲರು ರೋಗಕ್ಕೆ ತುತ್ತಾಗುತ್ತಿರೋ ಸಾಂಕ್ರಾಮಿಕ ಸ್ಥಿತಿ ನಮಗೆ ಈಗ ಬಂದೊದಗಿದೆ.
ಮಂಗಳೂರಿನಲ್ಲಿ "ಇಲಿ ಜ್ವರ"ದ ಚಳಿಯಾದರೆ, ನಮ್ಮ ಬೆಂದಕಾಳೂರಿನಲ್ಲಿ "ಡೆಂಗು ಜ್ವರ"ದ ಡಂಗೂರ. ಪ್ರತಿದಿನ ಒಂದಿಲ್ಲೊಂದು ಕಡೆ ಡೆಂಗುಗೆ ಬಲಿ, ಹಸುಳೆ-ಬಾಲಕಿ-ವೃದ್ದ, ಹೀಗೆ ಆಬಾಲವ್ರುದ್ದರಾಗಿ ಎಲ್ಲರನ್ನು ಕಾಡುತ್ತಿರುವ ರೋಗ "ಡೆಂಗು". ವಿಪರ್ಯಾಸ ಅಂದರೆ ಇದರ ಕಬಂಧ ಬಾಹುಗಳಿಗೆ ಸಿಲುಕಿ ನಾನು ಕೂಡ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದೇನೆ. ಆದ ಕಾರಣ ಈ ರೋಗದ ಗುಣಲಕ್ಷಣಗಳನ್ನ ಸವಿವರವಾಗಿ ತಿಳಿಸಿ, ಸಾಧ್ಯವಾದಷ್ಟು ಮುಂಜಾಗೃತೆ ವಹಿಸುವಂತೆ ಹೇಳೋ ಸಣ್ಣ ಪ್ರಯತ್ನವನ್ನ ಈ ಬ್ಲಾಗ್ ಮೂಲಕ ಮಾಡುವ ಪ್ರಯತ್ನ.
ಜನಸಾಮಾನ್ಯರು ಸುಲಭವಾಗಿ ಗುರುತಿಸಬಹುದಾದ ಈ ರೋಗದ ಪ್ರಮುಖ ಗುಣಲಕ್ಷಣಗಳು-
- ವಿಪರೀತ ಜ್ವರ- 101 ರಿಂದ 102 ಡಿಗ್ರಿ , ಕೆಲವೊಮ್ಮೆ 104 ಡಿಗ್ರಿ ವರೆಗೂ ಹೋಗುತ್ತದೆ. ಜ್ವರದ ಮಾತ್ರೆ ತೆಗೆದುಕೊಂಡ ಕೆಲವು ಘಂಟೆಗಳ ಕಾಲ ( ಒಂದು ಅಥವಾ ಎರಡು ಘಂಟೆ) ಸ್ವಲ್ಪ ಮಟ್ಟಿಗೆ ಕಡಿಮೆ ಅನ್ನಿಸಿದರು ಕೂಡ, ಮತ್ತೆ ಅಷ್ಟೇ ತೀವ್ರತೆಯ ಜ್ವರ ಮರಕಳಿಸುತ್ತದೆ.
- ಸಹಿಸಲಸಾಧ್ಯವಾದಷ್ಟು ಬೆನ್ನು ನೋವು, ಜೊತೆಗೆ ಕೈ ಕಾಲು ಸೋಲು ಬರುವುದು. ಬೆನ್ನು ನೋವಿನ ತೀವ್ರತೆ ನಿಮಗೆ ಸೀದಾ ಮಲಗಲು ಕೊಡುವುದಿಲ್ಲ.
ಎರಡರಿಂದ ಮೂರು ದಿನ ಈ ರೀತಿಯ ವಿಪರೀತ ಜ್ವರ ಮುಂದುವರಿಯುತ್ತದೆ. ಈ ಸಮಯದಲ್ಲೇ ನೀವು ವೈದ್ಯರನ್ನ ಕಂಡು ಸೂಕ್ತ ಪರೀಕ್ಷೆಗಳನ್ನ ಪಡೆಯುವುದು ಬಹಳ ಮುಖ್ಯ. ಯಾಕಂದರೆ ಈ ಜ್ವರದ ಸಂಚಿಕೆ ಮುಗಿದ ನಂತರದ ರೋಗದ ಗುಣಲಕ್ಷಣಗಳಲ್ಲಿ ಅತೀ ಅಂದರೆ ಅತೀ ಮುಖ್ಯವಾದ, ನಿಮ್ಮ ರಕ್ತದಲ್ಲಿ ಇರುವ ಪ್ಲೇಟ್ಲೆಟ್ಸ್(PLATELETS) ಕಡಿಮೆಯಾಗಲು ಶುರುವಾಗುತ್ತದೆ. ನಮ್ಮ ದೇಹದ ರಕ್ತವನ್ನ ಹೆಪ್ಪುಗಟ್ಟಿಸುವ ಕಾರ್ಯ ಈ ಪ್ಲೇಟ್ಲೆಟ್ಸ್ ಗಳದ್ದು. ಇವು ಕಡಿಮೆಯಾದಷ್ಟು ರಕ್ತ ದ್ರವ್ಯ ರೂಪದಲ್ಲೇ ಉಳಿದುಕೊಂಡು ,ರಕ್ತಸ್ರಾವ ಆಗಲು ಅನುಕೂಲಕರ ವಾತಾವರಣ ಉಂಟಾಗುತ್ತದೆ. ಮೇಲೆ ಹೇಳಿದಂತೆ ರಕ್ತ ಸ್ರಾವ ಆದರೆ ಅದನ್ನ ನಿಯಂತ್ರಿಸಲು ಅಗತ್ಯ ರಕ್ತ ಕಣ ಇಲ್ಲದೆ ಮನುಷ್ಯ ವಿವಿಧ ಅಂಗಾಂಗಗಳ ವೈಪಲ್ಯ ಉಂಟಾಗಿ ಸಾವನ್ನಪ್ಪುತ್ತಾನೆ.
ಇದೆಲ್ಲದರ ಮುನ್ಸೂಚನೆಯಂತೆ ಹೊಟ್ಟೆ ನೋವು, ತಲೆ ನೋವು ಶುರುವಾದರೆ ನಿಮ್ಮ ರೋಗ ಉಲ್ಭಣಗೊಳ್ಳುತ್ತಿದೆ ಎಂದರ್ಥ. ಅದು ಅಪಾಯದ ಮುನ್ಸೂಚನೆಯು ಹೌದು. ಆದ್ದರಿಂದ ಯಾವುದೇ ಜ್ವರ ಇರಲಿ, ತಕ್ಷಣ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದರೆ ಒಳ್ಳೆಯದು. ಅಲ್ಲದೆ ಈ ರೋಗ ಬಂದವರೆಲ್ಲರೂ ಸಾಯುವ ಸ್ತಿತಿ ತಲುಪುವುದಿಲ್ಲ. ಪ್ಲೇಟ್ಲೆಟ್ಸ್ ಕಡಿಮೆ ಆದರೆ ಸೂಕ್ತ ಗುಂಪಿನ ಪ್ಲೇಟ್ಲೆಟ್ಸ್ ಅನ್ನು ರಕ್ತದಾನ ದ ರೀತಿ ರೋಗಿಗೆ ನೀಡಿ ಆತನ ಪ್ಲೇಟ್ಲೆಟ್ಸ್ ಸಂಖ್ಯೆ ಯನ್ನ ವೃದ್ದಿಸಬಹುದು. ಹಾಗಾಗಿ ಈ ರೋಗ ಬಂದರೆ ಅನಗತ್ಯವಾಗಿ ಹೆದರುವ ಅಗತ್ಯ ಇಲ್ಲ. ನನ್ನನ್ನ ಉಪಚರಿಸಿದ ವೈದ್ಯರು ಸೊಗಸಾಗಿ ಹೇಳಿದ ರೀತಿ ನಿಮಗೆ ರುಚಿಸಬಹುದು. "ಡೆಂಗು" ಕೂಡ ಯಾವುದೇ ಬೇರೆ ರೀತಿಯ ವೈರಲ್ ಜ್ವರ ಇದ್ದಂತೆ. ಆದರೆ ವೈರಲ್ ಜ್ವರಗಳಲ್ಲಿ ಇದು "ಶಾರುಖ್ ಖಾನ್ "ಇದ್ದಂಗೆ. ಅನಗತ್ಯ ಪ್ರಚಾರ , ಆದರೆ ಅಷ್ಟೇ ಪ್ರಮುಖವಾದದು ಕೂಡ. ಸಿನಿಮಾದಲ್ಲಿ ಎಷ್ಟೋ ನಟರಿದ್ದರು ಶಾರುಖ್ ಗೆ ಪ್ರಾಮುಖ್ಯತೆ ಜಾಸ್ತಿ ಇರುವಂತೆ ವೈರಲ್ ಜ್ವರಗಳಲ್ಲಿ "ಡೆಂಗು" ಗೆ ಪ್ರಾಮುಖ್ಯತೆ. ಅಷ್ಟೇ. ಅನಗತ್ಯ ಭಯ ಬೇಡ. ಹಾಗೆ ನಿರ್ಲಕ್ಷ್ಯ ಬೇಡವೇ ಬೇಡ.
ಹಾಗಾದರೆ ಇದನ್ನ ತಡೆಗಟ್ಟಲು ಸಾಧ್ಯವಿಲ್ಲವೇ? ಕಂಡಿತ ಸಾಧ್ಯ.
- ಡೆಂಗು ಹರಡುವುದು "ಎಡೆಸ್" ಎಂಬ ಸೊಳ್ಳೆಯ ಕಡಿತದಿಂದ. ಇದು ಶುದ್ದ ನೀರಿನಲ್ಲಿ, ಅಂದರೆ ನಮ್ಮ ಮನೆಯ ಅಡಿಗೆ ಮನೆಯಲ್ಲಿ ಎಲ್ಲೋ ಮೂಲೆಯಲ್ಲಿ ಶೇಖರಿಸಿರೋ ನೀರು, ಅಥವಾ ಚಾವಣಿ ಮೇಲೆ ನಿಂತ ಮಳೆ ನೀರು, ಮನೆಯ ಬಳಿ ಇರುವ ಕಸದ ಗುಡ್ಡೆಯಲ್ಲಿ ಇರೋ ಯಾವುದೊ ಚಿಪ್ಪು-ಬಾಟಲಿ ಯಲ್ಲಿ ನಿಂತ ಸ್ವಲ್ಪವೇ ಸ್ವಲ್ಪ ನೀರು ಕೂಡ ಇದರ ವಾಸ ಸ್ಥಾನ. ಇಂತ ಅನಾವಶ್ಯಕವಾಗಿ ಶೇಕರಿಸಿರೋ ನೀರನ್ನ ಆದಷ್ಟು ಹುಡುಕಿ ಶುಚಿ ಮಾಡಿ. ಮನೆಯ ಬಳಿ, ಚಾವಣಿಯ ಮೇಲೆ, ಬಾತ್ ರೂಮ್ನಲ್ಲಿ ಇರೋ ಸಣ್ಣ ಸಣ್ಣ ಸಂಧಿಗಳು ನೀರು ನಿಲ್ಲೋ ಅಂತ ಜಾಗಗಳನ್ನ ರಿಪೇರ್ ಮಾಡಿ.
- ಅಲ್ಲದೆ ಈ ಸೊಳ್ಳೆ ಕಚ್ಚುವುದು ಬಹಳಷ್ಟ ಸಲ ದಿನದ-ಬೆಳಕಿನ ಸಮಯದಲ್ಲಿ. ಆದ್ದರಿಂದ ಹಗಲ ಹೊತ್ತು ಸಹ ಸೊಳ್ಳೆ ಇಂದ ಸೂಕ್ತ ನಿಯಂತ್ರಣ ಸಾಧನಗಳನ್ನ ಉಪಯೋಗಿಸಿ.
- ಆದಷ್ಟು ಹೊರ ಜಾಗಗಳಿಗೆ ಪ್ರಯಾಣವನ್ನ ಈ ಮಳೆಗಾಲ ಮುಗಿಯುವವರೆಗೂ ಕಡಿಮೆ ಮಾಡಿ.
- ಮಕ್ಕಳನ್ನ ಸಂಜೆಯ ವೇಳೆ ಆಟಕ್ಕೆ ಕಳುಹಿಸುವಾಗ ಅವರು ಕಸ-ನೀರು ಇಂತ ಜಾಗಗಳಿಂದ ದೂರವೇ ಇರುವಂತೆ ನೋಡಿಕೊಳ್ಳಿ.
- ಮನೆಯ ಸುತ್ತಮುತ್ತ ಕಸವನ್ನ ಆದಷ್ಟು ಹಾಕುವುದು ಕಡಿಮೆ ಮಾಡಿ, ಸೂಕ್ತ ಜಾಗದಲ್ಲೇ ವಿಲೇವಾರಿ ಮಾಡಿ.
ನಮ್ಮ ಕಡೆ ಇಂದ ಸಾಧ್ಯವಾದಷ್ಟು ನಿಯಂತ್ರಿಸುವ ಕ್ರಮಗಳನ್ನ ನಾವು ಜರುಗಿಸೋಣ. ಸರ್ಕಾರ ತನ್ನ ಜವಾಬ್ದಾರಿ ಅರಿತು ಕೆಲಸ ಮಾಡಲಿ. ಸರ್ವರಿಗೂ ಒಳ್ಳೆ ಆರೋಗ್ಯ ಇರಲಿ.