Wednesday, October 5, 2011

"ಕತ್ತ್ಲಲ್ಲಿ ಕರಡೀಗೆ ಜಾಮೂನು ತಿನಿಸೋಕೆ ಯಾವತ್ತು ಹೋಗ್ಬಾರ್ದು ರೀ...."

ನಮ್ಮ ದೇಶದಲ್ಲಿ ಪ್ರಶಸ್ತಿಗಳಿಗೆ ಬರ ಅನ್ನೋದೇ ಇಲ್ಲ. ವರ್ಷದಲ್ಲಿ ಏನಿಲ್ಲ ಅಂದರೂನು ದಿನಕ್ಕೊಂದು ಪ್ರಶಸ್ತಿಯನ್ನ ನಮ್ಮ ಘನತೆವೆತ್ತ ರಾಷ್ಟ್ರಾಧ್ಯಕ್ಷರು ನೀಡುತ್ತಲೇ ಇರ್ತಾರೆ. ಅವುಗಳಲ್ಲಿ ಎಷ್ಟು ಪ್ರಶಸ್ತಿಗಳು ಯೋಗ್ಯರಿಗೆ ಹೋಗುತ್ತವೆ ಅನ್ನೋದು ಮಾತ್ರ ನಿಘೂಡ!! ಇದೆ ಕಾರಣಕ್ಕೋ ಏನೋ ನಮ್ಮ ಪತ್ರಿಕೆಗಳು ಯಾರಾದರು ಪ್ರಶಸ್ತಿಗಳಿಗೆ ಭಾಜನರಾದರೆ, "ಶ್ರೀ ಯವರಿಗೆ ದಕ್ಕಿದ ಪ್ರಶಸ್ತಿ"  ಅಂತಾನೋ , ಇಲ್ಲ "ಪ್ರಶಸ್ತಿಯನ್ನ ಗಿಟ್ಟಿಸಿಕೊಂಡ ಶ್ರೀ.." ಅನ್ನೋ ಮುಖಪುಟ ವರದಿಯನ್ನ ಹಾಕ್ತಾರೆ. ನಮ್ಮ ವೈದ್ಯಕೀಯ ಭಾಷೇಲಿ ಹೇಳೋದಾದ್ರೆ ಖಾಯಿಲೆ ಬಿದ್ದ ವ್ಯಕ್ತಿ ಕಷ್ಟ ಪಟ್ಟು ಸ್ವಲ್ಪ ಊಟ ಮಾಡಿ ಅದೇನಾದ್ರೂ ವಾಂತಿ ಆಗ್ಲಿಲ್ಲ ಅಂದ್ರೆ ದಕ್ಕಿಸ್ಕೊಂಡ ಅಂತ ಹೇಳ್ತಿವಿ. ಅಂದ್ರೆ ಕಷ್ಟಪಟ್ಟು ಒಳಗೆ ಹಾಕಿಕೊಳ್ಳೋ ಕ್ರಿಯೆ. ಅದೇ ರೀತಿ ಗಿಟ್ಟಿಸಿಕೊಳ್ಳೋದು ಅನ್ನೋದು ಕೂಡ self explanatory  ಪದ. ಹೀಗೆ ನೈತಿಕತೆಯಿಲ್ಲದ ಪ್ರಶಸ್ತಿಗಳ ಮಧ್ಯೆ ನಮ್ಮ ಭಾರತೀಯ ಮಿಲಿಟರಿ ಕೊಡುವ ''ಶೌರ್ಯ ಚಕ್ರ'' ಪ್ರಶಸ್ತಿ ಭಿನ್ನವಾಗಿ ನಿಲ್ಲುತ್ತೆ. ಪ್ರಶಸ್ತಿಯ ಮಾನದಂಡವು ಕೂಡ ಅಷ್ಟೇ, ವೈರಿಯ ಜೊತೆ ನೇರವಾಗಿ ಅಲ್ಲದಿದ್ದರೂ, ಧೈರ್ಯ ಸಾಹಸದಿಂದ ಮಾಡುವಂತ self sacrifice ಗೆ ಈ ಪ್ರಶಸ್ತಿ ಮೀಸಲು. ತನ್ನ ಜೀವವನ್ನು ಲೆಕ್ಕಿಸದೆ ಭಯೋತ್ಪಾದಕರನ್ನ ಹೊಡೆದು ಹಾಕಿದ ಕಾಶ್ಮೀರದ ಕನ್ಯೆ ನಮ್ಮ ಕಣ್ಣ ಮುಂದೆ ನಿಲ್ಲೋದು ಈ ಪ್ರಶಸ್ತಿಯ ದೆಸೆಯಿಂದಲೇ. ಅಂತಹ ಎಷ್ಟೋ ವ್ಯಕ್ತಿಗಳನ್ನ ನಾವು ವೈಯಕ್ತಿಕವಾಗಿ ಭೇಟಿ ಮಾಡೋದು ಸಾಧ್ಯವೇ ಇಲ್ಲ. ಅವರುಗಳ ಕಥೆ ಕೇಳಿ ಹೆಮ್ಮೆ ಪಡೋದೇ ದೊಡ್ಡ ವಿಷಯ ಅನ್ಸುತ್ತೆ. ಆದರೆ ಈ ವ್ಯಕ್ತಿಗಳನ್ನ ಇದ್ದಕ್ಕಿದ್ದಂಗೆ ನೆನೆಯೋಕೆ ಕಾರಣ, ಆ ರೀತಿಯ ವ್ಯಕ್ತಿಯೋರ್ವನನ್ನ ನೋಡಿ, ಮಾತಾಡಿಸಿ, ಅವನ ಕಥೆ ಕೇಳಿ ಬೆಚ್ಚಿ ಬೀಳೋ ಪ್ರಸಂಗ ಬಂದಾಗ. ಆ ವ್ಯಕ್ತಿ ನಮ್ಮ ಆಸ್ಪತ್ರೆಯ ಕಥನಗಳ ಒಂದು ಪುಟ. ಅವನ ಪದಗಳಲ್ಲೇ ನನಗೆ ಕಥೆಯನ್ನ ವಿವರಿಸಿದ ಚಿತ್ರಣವನ್ನ ನಿಮಗೆ ಕಟ್ಟಿ ಕೊಡುವ ಪ್ರಯತ್ನ ಮಾಡ್ತೀನಿ. 
"ಅದು ಬೆಳಿಗ್ಗೆ  ಸುಮಾರು 10 :30 ಇರ್ಬೇಕು ಸಾರ್. ಹೊತ್ತಿಗ್ ಮುಂಚೆನೇ ಎದ್ದು ತಿಂಡಿ ತಿನ್ಕಂಡು ಹೊಲದ ಕಡಿಕೆ ಹೋಗಿದ್ದೆ. ನಮ್ದು ಮೆಕ್ಕೆ ಜೋಳದ ಹೊಲ ಸಾರ್, ಚನ್ನಾಗಿ ಬೆಳ್ಕಂಡ್ ಇದ್ದಾವೆ. ಏನಿಲ್ಲ ಅಂದ್ರು ಆರು ಅಡಿ ಅಷ್ಟು ಎತ್ತರ ಇದಾವೆ ಫಸಲು. ಅದರೊಳಗೆ ನಡ್ಕಂಡು ಹೊಯ್ತ ಇದ್ರೆ ಮುಂದೆ ಬರೋರು, ಹಿಂದೆ ಬರೋರು ಯಾರು ಕಾಣಾಕಿಲ್ಲ. ಹೊಲದ ಒಳಗೆ ನಡ್ಕಂಡು ಹೋಗ್ತಾ ಇರ್ಬೇಕಾದ್ರೆ ಎದ್ರುಗಡೆ ಇಂದ ಸರ ಸರ ಸದ್ದು. ಹೆಗ್ಗಣಗಳು ಬಹಳ ಇರದ್ರಿಂದ ಅವೆಲ್ಲ ಮಾಮೂಲು ಅನ್ನೋಹಂಗೆ ನಮಗೆ ಅಭ್ಯಾಸ. ಹಂಗೆ ಮುಂದೆ ಹೊಯ್ತ ಇದ್ದೆ ನೋಡಿ, ಅದೆಲ್ಲಿಂದ ಬಂತೋ ಸಾರ್ ಸೀದಾ ಮೈ ಮೇಲೆ ಎಗರಿ ಹಂಗೆ ನನ್ನನ್ನ ಕೆಳಿಕೆ ಕೆಡವಿ ಕೊಂಡು ಮೇಲೆ ಹತ್ತಿ ನಿಂತು ಬಿಡ್ತು ಸಾರ್. ನನ್ನನ್ನ ನಾನು ಸುಧಾರಿಸ್ಕೊಂಡು ಏನು ಎತ್ತ ಅಂತ ನೋಡೋ ಅಷ್ಟು ಟೈಮ್ ಕೊಡದಂಗೆ ಮೈಮೇಲೆ ಎಗ್ರಿತ್ತು ಸಾರ್. ಆಮೇಲೆ ನೋಡಿದ್ರೆ ಒಂದು ಎಂಟು ಅಡಿ ಎತ್ತರದ ಕರಡಿ ಸಾರ್. ಏನ್ ಮಾಡಿದ್ರು ಬಿಡಿಸ್ಕೊಳ್ಳೋಕೆ ಆಗ್ದಂಗೆ ಪಟ್ಟು ಹಾಕ್ಬಿಟ್ಟಿತ್ತು. ಅದರ ಎರಡೂ ಕೈಯಾಗೆ ನನ್ನ ತಲೆ ಕೂದಲು ಹಿಡ್ಕಂಡು ಕೀಳ್ತಾ ಇದ್ರೆ, ಒಂದು ಕಾಲ್ನ ಹೊಟ್ಟೆ ಮೇಲೆ ಇಟ್ಟಿತ್ತು. ಹಂಗು ಹಿಂಗು ಕೊಸ್ರಾಡ್ಕೊಂಡು ಸ್ವಲ್ಪ ಸಡಿಲ ಮಾಡ್ಕೊಂಡೆ ಸಾರ್. ಯಾವಾಗ್ ನಾನು ಬಿಡಿಸ್ಕೊಳ್ಳೋಕೆ  ನೋಡ್ತಾ ಇದ್ದೀನಿ ಅಂತ ಗೊತ್ತಾಯ್ತೋ ನೋಡಿ, ಹಂಗೆ ನನ್ನ ತೊಡೆಗೆ ಬಾಯಿ ಹಾಕಿ ಕಚ್ಚಿ ಬಿಡ್ತು ಸಾರ್. ಅಬ್ಬ! ಹೇಳಬಾರದು ಸಾರ್. ನೋವು ಅಂದ್ರೆ ಅವರಮ್ಮನ್ ಯಾವ ನನ್ನ ಮಗಂಗೂ ಬೇಡ ಸಾರ್ ಅದು. ನಾನು ಹೊಂಟೆ ಹೋದೆ ಅಂದ್ಕಂಡೆ ಸಾರ್ ಅವಾಗ. ಹಂಗು ಹಿಂಗು ಮಾಡಿ ನನ್ನ ಬಲಗೈನ ನನ್ನ ತೊಡೆ ಹತ್ರ ತಗಂಡು ಹೋಗಿ, ಹೆಬ್ಬೆಟ್ನ ಅದ್ರ ಬಾಯೊಳಗೆ ಇಟ್ಟೆ. ಸ್ವಲ್ಪ grip ತಗಂಡು ನನ್ನ ಎರಡೂ ಕಾಲ್ನ ಎತ್ತಿ ಅದ್ರ ಎದೆಗೆ ಜಾಡ್ಸಿ ಒದ್ದೆ ನೋಡಿ ಸಾರ್. ಸ್ವಲ್ಪ ಹಂಗೆ ಹಿಂದಕ್ಕೆ ಸರ್ಕಂತು. ಸಿಕ್ಕಿದೆ ಟೈಮು ಅಂತ ಅದ್ರ ಬಾಯೊಳಗೆ ಹಾಕಿದ್ದ ಬೆಟ್ತ್ನ ಇನ್ನ ಒಳಗೆ ಹಾಕಿ ಕೈಯಿಂದ ಅದ್ರ ಮುಖನ ಹಿಂದೆ ತಳ್ಳಿದೆ ಸಾರ್. ಆಗ ತೊಡೆಗೆ ಹಾಕಿದ ಬಾಯಿ ಬಿಡ್ತು. ಇನ್ನೊಂದ್ ಸಲ ಜಾಡ್ಸಿ ಒದ್ದ ಮೇಲೆ ಹಿಂದೆ ಹೋಗಿದ್ದು, ಅದೇನ್ ಅನ್ನಿಸ್ತೋ ಏನೋ ಬಿಟ್ಟು ಓಡಿ ಹೋತು ಸಾರ್. ಅದೃಷ್ಟ ಇತ್ತು ಸಾರ್, ಇಲ್ಲ ಅಂದ್ರೆ ಅದು ನನ್ನ ಕೊಂದಾಕಿ ಹೋಗಿದ್ರುನು ನಮ್ಮ ಊರೊರಿಗೆ ಇಲ್ಲ ಮನೆವ್ರಿಗೆ ತಿಳಿಯೋಕೆ ಮೂರು ಇಲ್ಲ ನಾಕು ದಿನ ಆಗೋದು. ಜೋಳ ನೋಡಿ, ಅಷ್ಟು ಎತ್ತರ ಬೇರೆ ಇರೋದ್ರಿಂದ ವಾಸನೆ ಬಂದ ಮೇಲೇನೆ ತಿಳಿಯೋದು ಜನಕ್ಕೆ. ಅದೇನೋ ಸಾರ್, ಬಿಡಿಸ್ಕೊಂಡು ಬಂದು ನಿಮ್ ಮುಂದೆ ಕುಂತಿದ್ದಿನಿ ನೋಡಿ ಸಾರ್."
ಅವನ ಗಾಯಗಳಿಗೆ ಡ್ರೆಸ್ಸಿಂಗ್ ಮಾಡ್ತಾ ಇದ್ದ ನನ್ನ ಕೈಗಳು ತಾವಾಗೆ ತಮ್ಮ ವೇಗವನ್ನ ಕಡಿಮೆ ಮಾಡಿದ್ವು. ಅವನ ಕಥೆ ಕೇಳಿ ಎರಡು ನಿಮಿಷ ಏನು ಪ್ರತಿಕ್ರಿಯೆ ನೀಡಬೇಕು ಅನ್ನೋದೇ ತೋಚಲಿಲ್ಲ. ಯಾಕಂದ್ರೆ ಮೈಸೂರು zoo ನಲ್ಲಿ ಪಂಜರದ ಹಿಂದೆ ಪ್ರಾಣಿಗಳನ್ನ ನೋಡಿ ಬೆಳೆದ ತಲೆಮಾರು ನಮ್ಮದು. ಅನಿಮಲ್ ಪ್ಲಾನೆಟ್ ಗಳಲ್ಲಿ ಕ್ರೂರವಾಗಿ ವರ್ತಿಸೋ ರೀತಿಯನ್ನ ನೋಡಿ ತಿಳಿದುಕೊಳ್ಳೋ ವ್ಯವಸ್ಥೆ ಇರೋ ಸಮಾಜದ ನಡುವೆ ಇರೋರು ನಾವುಗಳು. ಅಂತಾದ್ದರಲ್ಲಿ ನನ್ನ ಮುಂದೆ ಇರೋ ವ್ಯಕ್ತಿ ಒಂದು ಮೃಗದ ಜೊತೆ ಕಾದಾಡಿ ಬಂದು ಕುಂತಿದ್ದಾನೆ. ಆದರೆ ಅವನು ಆ ಮೃಗವನ್ನ ಗೆದ್ದು ಬಂದ ಸಾಹಸವನ್ನ ಹೇಳೋವಾಗ ಕೊಂಚವೂ ಕೂಡ ಹಮ್ಮು-ಬಿಮ್ಮು ಇಲ್ಲದೆ ಹೇಳಿದ ರೀತಿ ನಿಜಕ್ಕೂ ಮೆಚ್ಚುವಂತಾದ್ದು.
ದಿನಾ ಬೆಳಗ್ಗೆಯಿಂದ ಸಂಜೆ ತನಕ ಕೆಲಸ ಮಾಡಿದಕ್ಕೆ ನಮ್ಮ ಪ್ರಾಣ ತಿಂದುಬಿಟ್ಟ ಮ್ಯಾನೇಜರ್ ಅಂತ ಬೈಯ್ಯೋ ಮುಂಚೆ, ಸಣ್ಣದಾಗಿ ಕಾಯಿಲೆ ಬಿದ್ರೆ ನಂಗೆ ಯಾಕಪ್ಪ ಬಂತು ಅಂತ ಗೋಳಾಡೋ ಮುಂಚೆ, ಜೀವನದಲ್ಲಿ ಅಂದ್ಕೊಂಡಿದ್ದು ಅಂದಕೊಂಡಂಗೆ ಸಿಗ್ಲಿಲ್ಲ ಅಂತ ಜಿಗುಪ್ಸೆ ಪಡೋ ಮುಂಚೆ ನಮ್ಮ ನಡುವೆ ಬಾಳೋ ಈ ರೀತಿ ವ್ಯಕ್ತಿಗಳನ್ನ ನೋಡಿ ಕಲಿಯೋದು ಸಾಕಷ್ಟಿದೆ ಅಲ್ವೇ? ಮೇಲೆ ಹೇಳಿದ ವ್ಯಕ್ತಿ ತರ ಕಾಡಿಗೆ ಹೋಗೋದು ಬೇಡ, ಮನೆಲೇನೆ ರಾತ್ರಿ ಕತ್ತಲಿನಲ್ಲಿ ಬಾತ್ ರೂಂ ಗೆ ಹೋಗೋವಾಗ ಅಚಾನಕ್ ಆಗಿ ಮೈ ಮೇಲೆ ಒಂದು ಇಲಿ ಬಿದ್ರೆ ಹೆಂಗಿರತ್ತೆ ನಮ್ ರಿಯಾಕ್ಶನ್ ಅಲ್ವಾ???? 
ಕಾಕತಾಳೀಯವೋ ಏನೋ , ಈ ಬ್ಲಾಗ್ ಬರೆಯೋವಾಗ ಯೋಗರಾಜ್ ಬಟ್ಟರು ಬರೆದಿರೋ ಹಾಡನ್ನ ಕೇಳ್ತಾ ಇದ್ದೆ. ಸರಿಯಾಗೇ ಬರದಿದ್ದರೆ ಅನ್ನಿಸ್ತು "ಕತ್ತ್ಲಲ್ಲಿ ಕರಡೀಗೆ ಜಾಮೂನು ತಿನಿಸೋಕೆ ಯಾವತ್ತು ಹೋಗ್ಬಾರ್ದು ರೀ...."

Thursday, July 7, 2011

"ರಕ್ತ ಕಣ್ಣೀರು"

ಮೊನ್ನೆಯ ದಿನ ಹಳೆಯ ದಿನಪತ್ರಿಕೆಗಳನ್ನ ಗಂಟು ಕಟ್ಟಿ ಇಡೋವಾಗ ಜನವರಿ ತಿಂಗಳಿನ ಲವಲVK ನನ್ನ ಗಮನ ಸೆಳೆಯಿತು. ಅದರಲ್ಲಿ ಓದುಗರೊಬ್ಬರು ತಮಗಾದ ಒಂದು ಅನುಭವವನ್ನ ಹಂಚಿಕೊಂಡಿದ್ದರು. ಒಬ್ಬ ವೃದ್ದ ತಂದೆ ಆಸ್ಪತ್ರೆಯಲ್ಲಿ ದಾಖಲಾದ ತನ್ನ ಮಗನಿಗೆ ಅವಶ್ಯಕತೆಯಿದ್ದ ರಕ್ತಕ್ಕಾಗಿ ಇಡಿ ಊರು ತಿರುಗಾಡಿ ಕೊನೆಗೆ ಈ ಓದುಗನ ಬಳಿ ಬಂದು ತನ್ನ ಪರಿಸ್ಥಿತಿ ವಿವರಿಸಿ ಇವರನ್ನ ರಕ್ತದಾನ ಮಾಡಲು ಕರೆದೊಯ್ದಿದ್ದರಂತೆ. ಆದರೆ ಆ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷಿಸಿದ ವೈದ್ಯರು ಇವರ ರಕ್ತದ ಗುಂಪು ಹೊಂದುವುದಿಲ್ಲವೆಂದು ನಿರಾಕರಿಸಿದಾಗ ಆ ವೃದ್ದ ತಂದೆ ಇಟ್ಟುಕೊಂಡಿದ್ದ ಸಣ್ಣ ಆಸೆ ಬತ್ತಿದಂತಾಗಿದ್ದನ್ನು ನೋಡಿ ಸಹಿಸಲಾಗದೆ ರಕ್ತವನ್ನ ಆಸ್ಪತ್ರೆಯಲ್ಲಿ ಹೊಂದಿಸಲಾಗದ ವೈದ್ಯರ ಮೇಲೆ ಸಿಟ್ಟು ತೋರ್ಪಡಿಸುತ್ತ "ರಾಕ್ಷಸ"ರ ರೀತಿಯಲ್ಲಿ ಗೋಚರಿಸಿದರು ಅನ್ನೋದನ್ನ ಹಾಗು ಆ ವೃದ್ದ ತಂದೆಯ ನೋವಿಗೆ ಸ್ಪಂದಿಸುವಂತೆ ಆ ಲೇಖನವನ್ನ ಬರೆದಿದ್ದರು. ಬಹುಶ ಆ ತಂದೆಯ ಗೋಳು ನೋಡಿ ಕೆಲವು ವಸ್ತುಸ್ಥಿತಿಗಳನ್ನು ತಿಳಿಯದೆ ಹಾಗು ಯಾರ ಬಳಿಯೂ ವಿಚಾರಿಸದೆ ಭಾವೋದ್ವೇಗದಲ್ಲಿ ಬರೆದಿರಬೇಕು. ಅವರ ಲೇಖನ ಓದಿದ ನಂತರ ಕೆಲವು ವಿಷಯಗಳನ್ನ ಜನಸಾಮಾನ್ಯರಿಗೆ ಸ್ಪಷ್ಟಪಡಿಸದ ಹೊರತು ಈ ರೀತಿಯ ಅಪನಂಬಿಕೆಗೆಗಳು ಸರ್ವೆಸಾಮನ್ಯವಾಗಿಬಿಡುತ್ತವೆ. ಇದನ್ನ ಸ್ವಲ್ಪ ಮಟ್ಟಿಗೆ ನಿವಾರಿಸುವ ನಿಟ್ಟಿನಲ್ಲಿ ಕೆಲವು ವಿಷಯಗಳನ್ನ ಹರವಿಡುತ್ತಿದ್ದೇನೆ.
೧) ಪ್ರತಿಯೊಬ್ಬ ವ್ಯಕ್ತಿಯು ತನ್ನದೊಂದು ರಕ್ತದ ಗುಂಪು ಹೊಂದಿರುವುದು ನಮಗೆಲ್ಲ ತಿಳಿದೇ ಇರುತ್ತದೆ. ಅದು A, B, AB  ಅಥವಾ O ಆಗಿರಬಹುದು. ಹಾಗೆಯೇ Rh system ಅನ್ನೋ ವಿಧಾನದಿಂದ ರಕ್ತದ ಗುಂಪಿನ ಜೊತೆಗೆ ಅದು Positive  ಅಥವಾ Negative  ಅಂತ ವಿಂಗಡಿಸುತ್ತೇವೆ. ಹಾಗಾಗಿ ಒಬ್ಬ ವ್ಯಕ್ತಿಗೆ ರಕ್ತದ ಅವಶ್ಯಕತೆ ಇದ್ದರೆ, ಅವನಿಗೆ ತನ್ನದೇ ಗುಂಪಿನ  Rh system ಕೂಡ ಹೊಂದುವಂತಹ ರಕ್ತವನ್ನೇ ನೀಡಬೇಕಾಗುತ್ತದೆ. ಒಂದು ವೇಳೆ ಬೇರೆ ಗುಂಪಿನ ರಕ್ತ ನೀಡಿದಲ್ಲಿ reaction ಆಗಿ ವ್ಯಕ್ತಿ ಸಾಯುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಆದಕಾರಣ ಆಸ್ಪತ್ರೆಯಲ್ಲಿ ನೀವು ನಿಮ್ಮ ಸ್ನೇಹಿತನಿಗೋ ಅಥವಾ ಇನ್ನರಿಗಾದರು ಬಯಸಿಯೂ ರಕ್ತದಾನ ಮಾಡಲು ಇಚ್ಚಿಸಿದಾಗ ನಿಮ್ಮ ಮತ್ತು ರೋಗಿಯ ರಕ್ತ ಗುಂಪಿನಲ್ಲಿ ಹೊಂದಾಣಿಕೆಯಾಗದ  ಕಾರಣ ನೀಡಿ ನಿಮ್ಮ ರಕ್ತ ಬಳಸಲು ವೈದ್ಯರು ನಿರಾಕರಿಸಿದರೆ ಅದು ರೋಗಿಯ ಹಿತದೃಷ್ಟಿಯಿಂದಲೇ ಅನ್ನೋದು ತಿಳಿಯಬೇಕು.
೨) ಇನ್ನೂ ಕೆಲವೊಮ್ಮೆ ನಿಮ್ಮ ರಕ್ತದ ಗುಂಪು ನೀವು ದಾನ ಮಾಡಲಿಚ್ಚಿಸಿದ ರೋಗಿಯ ರಕ್ತದ ಗುಂಪಿನೊಂದಿಗೆ ಹೊಂದಾಣಿಕೆಯಾದರು ಸಹ, ನೀವು ಜ್ವರದಿಂದ ಬಳಲುತ್ತಿದ್ದರೆ, ಅಥವಾ ೪೫ ಕಿಲೋಗಿಂತ ಕಡಿಮೆ ತೂಕವಿದ್ದರೆ, ಅಥವಾ ನಿಮ್ಮಲ್ಲಿ ಏನಾದ್ರೂ ರಕ್ತದಿಂದ ಹರಡಬಹುದಂತ ರೋಗಾಣುಗಳಿದ್ದಲ್ಲಿ ನಿಮ್ಮ ರಕ್ತವನ್ನ ಬೇರೆಯವರಿಗೆ ನೀಡಲು ಬರುವುದಿಲ್ಲ.
೩) ಮೇಲಿನ ಎರಡು ವಿಷಯಗಳು ಎಲ್ಲರಿಗು ತಿಳಿದಿರುವ ಸಾಧ್ಯತೆ ಇದೆ. ಇವೆರಡಕ್ಕಿಂತ ಮುಖ್ಯವಾದ ಮತ್ತು ರೋಗಿಯ ಸಂಬಂಧಿಕರು ಸಾಮಾನ್ಯವಾಗಿ ಕೇಳುವ ಪ್ರಶ್ನೆ ಎಂದರೆ "ನಮ್ಮ ಕಡೆಯ ಹುಡುಗರೇ ರಕ್ತದಾನ ಮಾಡಿದರು ಕೂಡ ರಕ್ತ ನಿಧಿ ಘಟಕದವರು test  ಮಾಡಲು ದುಡ್ಡು ಕಟ್ಟಲು ಕೇಳುತ್ತಿದ್ದಾರೆ. ನಮ್ಮದೇ ರಕ್ತಕ್ಕೆ ನಾವು ಮತ್ತೆ ದುಡ್ಡು ಕಟ್ಟಬೇಕಾದ್ದು ಯಾಕೆ?". ಇಲ್ಲಿ ನಿಮ್ಮ ಕಡೆಯ ವ್ಯಕ್ತಿಯೇ ರಕ್ತದಾನ ಮಾಡಿದರು ಕೂಡ, ಹಾಗು ಆ ವ್ಯಕ್ತಿ ಬಾಹ್ಯವಾಗಿ ಆರೋಗ್ಯವಂತನಂತಿದ್ದರು, ಅವನ/ಳ ರಕ್ತದಲ್ಲಿ ರೋಗಲಕ್ಷಣಗಳಿಲ್ಲದೆ ವಾಸಿಸುವ ರೋಗಾಣುಗಳು ಇರಬಹುದು. ಹಾಗಾಗಿ ಅಂತಹ ರೋಗಾಣುಗಳನ್ನ ಪತ್ತೆ ಹಚ್ಚುವ ಸಲುವಾಗಿ ಕೆಲವು ಪರೀಕ್ಷೆಗಳನ್ನ ರಕ್ತದ ಮೇಲೆ ಮಾಡುವುದು ಅನಿವಾರ್ಯ ಹಾಗು ಈ ಪರೀಕ್ಷೆಗಳಿಗೆ ನಿಮಗೆ ಹಣ ಕಟ್ಟಲು ಹೇಳುತ್ತಾರೆ ವಿನಃ ಇನ್ಯಾವುದೇ ಕಾರಣಕ್ಕಾಗಿ ಅಲ್ಲ. ಆ ರೋಗಾಣುಗಳು ಯಾವುವು ಎಂದು ಕೇಳಿದರೆ ಬಹುಶ ನಿಮಗೆ ಅವುಗಳು ಪತ್ತೆಯ ಮಹತ್ವ ತಿಳಿಯಬಹುದು- HIV , Hepatitis , Syphilis ಇವು ಪ್ರಮುಖವಾದವು. ತಡೆಯಬಹುದಾದಗಳು ಇಂತಹ ರೋಗಗಳನ್ನ ರಕ್ತದ ಮೂಲಕ ರೋಗಿಗೆ ಹರಡುವುದು ಯಾವ ನ್ಯಾಯ ಅಲ್ಲವ? ಹಾಗಾಗೆ ಆ ಪರೀಕ್ಷೆಗಳು ಮಹತ್ವವನ್ನ ಪಡೆದುಕೊಳ್ಳುತ್ತವೆ.
೪) ಇನ್ನ ಕೆಲವರು "ಎಷ್ಟು ದುಡ್ದಾದರು ಕೊಡುತ್ತೇವೆ ನಿಮ್ಮ ಆಸ್ಪತ್ರೆಯಲ್ಲಿಯೇ ಶೇಖರಿಸಿರುವ ರಕ್ತವನ್ನ ನಮಗೆ ಕೊಡಿ ಎಂದರೆ ಆಸ್ಪತ್ರೆಯವರು ಕೊಡುವುದಿಲ್ಲ. ಆಸ್ಪತ್ರೆಯಲ್ಲಿ ಶೇಖರಿಸಿರುವ ರಕ್ತವನ್ನ ಕೊಡಬೇಕಾದರೆ condition ಹಾಕಿ  ನಿಮ್ಮ ಕಡೆಯವರು ಯಾರಾದರು ರಕ್ತ ಕೊಟ್ಟಲ್ಲಿ (ಅದು ಬೇರೆ ಗುಂಪಿನದ್ದು ಆಗಿದ್ದರು ಸಹ) ನಿಮ್ಮ ರೋಗಿಗೆ ಹೊಂದುವ ಗುಂಪಿನ ರಕ್ತವನ್ನ ಬದಲಾಯಿಸಿ ಕೊಡುತ್ತೇವೆ"ಎಂದು. ಇಲ್ಲಿ ಪ್ರಶ್ನೆ ದುಡ್ದಿನದಲ್ಲ. ಆಸ್ಪತ್ರೆಯಲ್ಲಿ ಶೇಖರಿಸಿರುವ ರಕ್ತ ರೋಗಿಗಳಿಗೆ ಅನ್ನೋದು ಅಷ್ಟೇ ಸತ್ಯ. ಅದನ್ನ ತುರ್ತು ಸಮಯದಲ್ಲಿ ಕೊಡುತ್ತಾರೆ ಅನ್ನೋದು ತಿಳಿದಿರುವ ವಿಷಯವೇ. ಆದರೆ ಒಮ್ಮೆ ಯೋಚಿಸಿ ನೋಡಿ, ಆಸ್ಪತ್ರೆಯವರಿಗಾದರು ಆ ರಕ್ತ ಎಲ್ಲಿಂದ ಬರಬೇಕು? ಅದು ತರಕಾರಿಯೋ ಅಥವಾ ಆಟದ ವಸ್ತುವಲ್ಲ, ಭೂಮಿಯಲ್ಲಿ ಬೆಳೆಯೋಕೆ ಇಲ್ಲ ಅಂಗಡಿಯಲ್ಲಿ ಖರೀದಿಸೋಕೆ. ಒಬ್ಬ ಆರೋಗ್ಯವಂತ ಮನುಷ್ಯನ ದೇಹದಿಂದ ಮಾತ್ರವೇ ರಕ್ತವನ್ನ ತೆಗೆದು ಶೇಖರಿಸಲು ಸಾಧ್ಯ. ಹಾಗಾಗಿ ಎಲ್ಲರಿಗು ಕೇವಲ ದುಡ್ಡಿಗೆ ಹಂಚಿದರೆ, ಉತ್ಪತ್ತಿಯ ಬಗ್ಗೆ ಯಾರು ಗಮನ ಕೊಡಬೇಕು ಹೇಳಿ? ಹಾಗಾಗಿ ಆಸ್ಪತ್ರೆಗಳು ನಿಮ್ಮ ರೋಗಿಗೆ ಹೊಂದುವ ರಕ್ತವನ್ನ ಕೊಡುವ ಮುಂಚೆ ನಿಮ್ಮ ಕಡೆಯವರಿಂದ ಅಷ್ಟೇ ಪ್ರಮಾಣದ ಬದಲಿ ರಕ್ತವನ್ನ ಕೇಳುತ್ತಾರೆ, ಯಾಕಂದರೆ ನಿಮ್ಮ ಕಡೆಯವರ ರಕ್ತದ ಗುಂಪು ನಾಳೆ ಬರುವ ಇನ್ನ್ಯಾವುದೋ ರೋಗಿಯೊಬ್ಬರಿಗೆ ಹೊಂದಿಕೊಳ್ಳಬಹುದು ಮತ್ತು  ನಾಳಿನ ದಿನ ಆಸ್ಪತ್ರೆಗೆ ತುರ್ತು ಸಮಯಕ್ಕೆ ರಕ್ತದ ಕೊರತೆ ಉಂಟಾಗಬಾರದು ಎಂದು. ಇದು ಇದು ಸಮಂಜಸವಲ್ಲವೇ?
  ವಸ್ತುಸ್ಥಿತಿ ಏನೆಂದರೆ ನಮ್ಮ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಬಹಳನೆ ಇದೆ, ಎಷ್ಟೇ ಸ್ವಯಂ ಸೇವಾ ಸಂಘಟನೆಗಳು ಪ್ರಯತ್ನ ಪಟ್ಟರು ಕೂಡ ಇದರ ಕೊರತೆ ನೀಗಿಸೋದರಲ್ಲಿ ಫಲ ಕಾಣೋದು ಅಷ್ಟು ಸುಲಭವಲ್ಲ. ಆದರೆ ಯಾವುದೇ ಸಮಸ್ಯೆ ಕೂಡ ದೊಡ್ಡದಲ್ಲ ಅನ್ನೋದು ಅಷ್ಟೇ ಸತ್ಯ, ಪ್ರತಿಯೊಬ್ಬರೂ ರಕ್ತ ದಾನ ಮಾಡಬಹುದು ಹಾಗು ವರ್ಷಕ್ಕೆ ಎರಡರಿಂದ ಮೂರು ಬಾರಿ ಮಾಡಬಹುದು. ಕನಿಷ್ಠ, ವರ್ಷಕ್ಕೆ ಒಮ್ಮೆ ನಮ್ಮ ಜನ್ಮದಿನದಂದು ರಕ್ತ ದಾನ ಮಾಡೋಣ. ನಮ್ಮ ರಕ್ತದಿಂದ ಇನ್ನೊದು ಜೀವ ಉಳಿದರೆ ನಮ್ಮ ಜನ್ಮದಿನ ಸಾರ್ಥಕವಾದಂತೆ. ಎಲ್ಲದಕ್ಕಿಂತ ಮುಖ್ಯವಾಗಿ ಜನಗಳ ತಿಳವಳಿಕೆಯನ್ನ ಬದಲಿಸೋಣ." ಕೊಳ್ಳೆ ಹೊಡೆದು ಹೋದ ಮೇಲೆ....................." ಹಾಗಾಗೋದು ಬೇಡ. ಎಚ್ಹೆತ್ತುಕೊಳ್ಳೋಣ. ನೀವು ಇದನ್ನ ಓದಿ, ಅದು ಉಪಯುಕ್ತ ಅನ್ನಿಸಿದಲ್ಲಿ ನಿಮ್ಮ ಸ್ನೇಹಿತರಿಗೂ ತಿಳಿಸಿ.

Thursday, April 21, 2011

ಕನ್ನಡದ ಪ್ರೇಕ್ಷಕನಾಗಿ ನಾನು ಡಬ್ಬಿಂಗ್ ವಿರೋಧಿಸುತ್ತೇನೆ!!!

ಕನ್ನಡ ಚಿತ್ರರಂಗದಲ್ಲಿ ಮತ್ತೆ ಡಬ್ಬಿಂಗ್ ವಿವಾದ ಶುರುವಾಗಿದೆ. ಡಬ್ಬಿಂಗ್ ಬೇಕಾ? ಬೇಡವಾ? ಅನ್ನೋ ಚರ್ಚೆ ಎಲ್ಲೆಲ್ಲು ನಡೀತಾ ಇದೆ.  ಡಬ್ಬಿಂಗ್ ಮಾಡೋದು ಎಷ್ಟು ಸರಿ-ತಪ್ಪು ಅನ್ನೋದನ್ನ ನಾನು ವಿಶ್ಲೇಷಣೆ ಮಾಡೋದು ಎಷ್ಟರ ಮಟ್ಟಿಗೆ ಸರಿ ಅನ್ನೋದೇ ಒಂದು ಜಿಜ್ಞಾಸೆ , ಯಾಕಂದ್ರೆ ಅದು ಪೂಜಾರಿನ ಹೋಗಿ ಯಾವ ತಳಿಯ ಕುರಿ ಮಾಂಸ ಚೆನ್ನಾಗಿರತ್ತೆ ಅಂತ ಕೇಳಿದಂಗೆ ಇರತ್ತೆ. ನನಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನೋದು ಕಟು ಸತ್ಯ, ಆದರೆ ಈ ನಾಡಿನ ಪ್ರಜೆಯಾಗಿ ನನ್ನ ಅನಿಸಿಕೆಗಳನ್ನ ಹೇಳೋದು ಒಳಿತು ಅನ್ನೋ ದೃಷ್ಟಿಯಿಂದ ಈ ಬ್ಲಾಗ್ ಬರಿತ ಇದ್ದೀನಿ.ನನ್ನ ಕೆಲವು ವಿಚಾರಗಳನ್ನ ನಾನು ಪಟ್ಟಿ ಮಾಡಿ ಹೇಳೋದಾದರೆ-
೧). ಚಲನಚಿತ್ರ ನಮಗೆ ಕೇವಲ ಮನರಂಜನೆಯ ಮಾಧ್ಯಮ, ಆದರೆ ಹಲವರಿಗೆ ಅದು ಉದ್ಯಮ, ಹೊಟ್ಟೆಪಾಡು. ಚಲನಚಿತ್ರಗಳ ನಿರ್ಮಾಣ ನಿಂತು ಹೋದರೆ ಎಷ್ಟೋ ಕುಟುಂಬಗಳು ಬೀದಿಗೆ ಬರೋದು ಖಾಯಂ( ನಿರ್ಮಾಪಕರು ಹಾಗು ನಟರನ್ನ ಬಿಟ್ಟು). ಹಾಗಾಗಿ ಇಂದು ಡಬ್ಬಿಂಗ್ ವಿರೋದಿಸುತ್ತಿರುವ ಚಲನಚಿತ್ರ ಕಾರ್ಮಿಕರು ಅವರ ಹಕ್ಕುಗಳಿಗೆ ಹೊರಾಡುತ್ತಿರೋದು  ತಪ್ಪಲ್ಲ ಅನ್ನಿಸುತ್ತೆ.
೨). ಡಬ್ಬಿಂಗ್ ಮಾಡಿದರೆ ನಾವು ಬೇರೆ ಭಾಷೆಯ ಒಳ್ಳೆ ಚಲನಚಿತ್ರಗಳನ್ನ ನಮ್ಮ ಭಾಷೆಯಲ್ಲಿ ನೋಡಿದಂಗೆ ಆಗುತ್ತೆ ಅನ್ನೋದು ಹಲವರ( ಕೆಲವರ) ವಾದ. ಆದರೆ ಕೇವಲ ಡಬ್ಬಿಂಗ್ ಮಾಡಿದರೆ ಮಾತ್ರ ಅವರ ಚಲನಚಿತ್ರಗಳನ್ನ ನೋಡಬೇಕೆ? ಅದನ್ನ ಅದರದೇ  ಭಾಷೆಯಲ್ಲಿ ನೋಡಬಹುದಲ್ಲವ?
೩). ಆಯ್ತು, ಎಷ್ಟೋ ಜನಕ್ಕೆ ಆ ಭಾಷೆ ಬರೋಲ್ಲ ಅಂತೀರಾ? ಬೇರೆ ಭಾಷೆಯ ಒಳ್ಳೆ ಚಲನಚಿತ್ರಗಳನ್ನ ನಮ್ಮ ಭಾಷೆಯಲ್ಲಿ ರೀಮೇಕ್ ಮಾಡಿ ಪ್ರದರ್ಶಿಸಿಲ್ಲವೇ? ಹಾಗೆ ಮಾಡೋಣ, ಮತ್ತೆ ಡಬ್ಬಿಂಗ್ ಏಕೆ ಬೇಕು?
೪). ಇನ್ನೂ ಒಂದು ವಾದ ಅಂದರೆ ಬೇರೆ ಭಾಷೆಯ, ಬಹುಕೋಟಿ ವೆಚ್ಚದ ಸಿನೆಮಾಗಳನ್ನ ನಮ್ಮ ಭಾಷೆಯಲ್ಲಿ ನಿರ್ಮಾಣ ಮಾಡೋದು ಸಾಧ್ಯನೇ ಇಲ್ಲ, ಹಾಗಾಗಿ ಅದನ್ನ ಡಬ್ಬಿಂಗ್ ಮೂಲಕವಾದರೂ ನೋಡೋಣ, ಅಂತಾನ? ಇಲ್ಲಿ ಸ್ವಲ್ಪ ದೀರ್ಘ ಪ್ರತಿವಾದವನ್ನ ಮಂಡಿಸುತ್ತ ಇದ್ದೇನೆ. ಹೋದ ವರ್ಷ ಆಂಗ್ಲ ಭಾಷೆಯ ಒಂದು ಚಲನಚಿತ್ರ ಬಿಡುಗಡೆಯಾಗಿತ್ತು- 2012  ಅನ್ನೋ ಚಲನಚಿತ್ರ. ಎಲ್ಲರು ಅದನ್ನ ಹೊಗಳುತ್ತಾ ಇದ್ದ ರೀತಿ ನೋಡಿ ಬಹಳ ನಿರೀಕ್ಷೆಯಿಂದ ನೋಡಲು ಹೋದರೆ ಅಲ್ಲಿ ಅದರ ಹಿಂದಿ ಡಬ್ಬಿಂಗ್ ಪ್ರದರ್ಶನ ಇತ್ತು. ಸರಿ, ಬಂದಿದ್ದು ಆಯಿತು ನೋಡೋಣ ಅಂತ ಹೋದೆ. ಆದರೆ ಅಲ್ಲಿ ನಿರಾಸೆ ಆಯಿತು ಅನ್ನೋದು ಕಟು ಸತ್ಯ. ಚಿತ್ರ ಚೆನ್ನಾಗಿರಲಿಲ್ಲ ಅಂತಲ್ಲ. ಆದರೆ ಆ ತಾಂತ್ರಿಕತೆ ಹಾಗು ಭಾವನೆಗಳನ್ನ ಒಬ್ಬ ಅಂಗ್ಲ ನಟ ಹಿಂದಿಯಲ್ಲಿ ವ್ಯಕ್ತ ಪಡಿಸುತ್ತಾ ಇದ್ದಾಗ ಹಾಸ್ಯಾಸ್ಪದ ಅನ್ನಿಸುತಿತ್ತು.  ಕೆಲವೊಮ್ಮೆ ಟಿ.ವಿ ಯಲ್ಲಿ ಬರುವ ಕಾರ್ಯಕ್ರಮದಲ್ಲಿ ಸ್ವಲ್ಪ ಏರುಪೇರಾಗಿ, ಶ್ರವಣಕ್ಕೂ ದೃಶ್ಯಕ್ಕೂ ಹೊಂದಾಣಿಕೆ ತಪ್ಪಿದಲ್ಲಿ ನೋಡುವ ನಮಗೆ (ನನಗಂತೂ) ಏನೋ ಆಭಾಸ ಅಥವಾ ಸಿಡುಕ ಉಂಟಾಗುತ್ತೆ ಹಾಗು ಆ ಕಾರ್ಯಕ್ರಮದ ಸವಿಯೇ ಹಾಳಾಗುತ್ತೆ. ಹೀಗಿರುವಾಗ ಆಂಗ್ಲ ನಟ ನಮ್ಮ ಭಾಷೆಯಲ್ಲಿ ಮಾತಾಡೋದನ್ನ ಊಹಿಸೋಕಗುತ್ತ? ಅದು ಚಲನಚಿತ್ರದ ಜೀವ ಸೆಲೆಯನ್ನೇ ಕಿತ್ತು ಎಸೆದಂತಾಗುವುದಿಲ್ಲವ? ಅಲ್ಲಿ ಹಾಸ್ಯ ಹೋಗಿ ಹಾಸ್ಯಾಸ್ಪದ ರಾರಾಜಿಸುತ್ತೆ. ಹಾಗಾಗಿ ಅಂತ ಉತ್ತಮ ಚಿತ್ರಗಳನ್ನ ಹಾಳು ಮಾಡೋ ಬದಲು ಅದರ ಮೂಲತನವನ್ನ ಗೌರವಿಸೋದು ಉತ್ತಮ ಅಲ್ಲವೇ?
೫).ಮಲಯಾಳಂ ಚಿತ್ರವನ್ನ ಕನ್ನಡದಲ್ಲಿ ಡಬ್ ಮಾಡಲಾಗಿದೆ ಅಂತಿಟ್ಟುಕೊಳ್ಳೋಣ, ಅದರಲ್ಲಿ ಅವರು ಆಚರಿಸುವ ಓಣಂ ಹಬ್ಬದ ದೃಶ್ಯ ನಮಗೆ ಏನು ಭಾವನೆಯನ್ನೇ ಉಕ್ಕಿಸೋದಿಲ್ಲ, ಬದಲಾಗಿ ಅದನ್ನೇ ಕನ್ನಡ ಭಾಷೆಯಲ್ಲಿ ಮತ್ತೆ ಚಿತ್ರೀಕರಿಸಿ ಆ ಹಬ್ಬದ ಬದಲಾಗಿ ನಮ್ಮ ಸೊಗಡಿನ ಮಾರಮ್ಮನ ಹಬ್ಬ ತೋರಿಸಿದರೆ ಅದರ ಮಜವೇ ಬೇರೆ ಇರತ್ತೆ. ನಿಮ್ಮ ಮನಸ್ಸಾಕ್ಷಿಯನ್ನ ಕೇಳಿ ಹೇಳಿ- ಹೌದೋ / ಇಲ್ಲವೋ?
೬).ಅದು ಅಲ್ಲದೆ ಇತ್ತೆಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮದವರು ಚಲನಚಿತ್ರ ರಂಗಕ್ಕೆ ಇಳಿದು ಅರ್ಧ ಅಧ್ವಾನ ಮಾಡಿದ್ದಾರೆ, ಅಲ್ಲದೆ ಈಗ ಡಬ್ಬಿಂಗ್ ಗೆ ಅವಕಾಶ ಕೊಟ್ಟರೆ ಬರಿ ಅದನ್ನೇ ಮಾಡಿ ನಮ್ಮ ಚಲನಚಿತ್ರಗಳೇ ಇಲ್ಲದಂತಾಗುವುದು ಬೇಕಾ? ಅದಕ್ಕೆ ನೀವು ಸಮಜಾಯಿಷಿ ಹೇಳಬಹುದು, ಗಟ್ಟಿ ಚಲನಚಿತ್ರಗಳು ಉಳಿದೆ ಉಳಿದುಕೊಳ್ಳುತ್ತವೆ ಇಲ್ಲದವು ಇದ್ದರು ಇರದಿದ್ದಂತೆ ಅಂತ. ಇದಕ್ಕೆ ಸ್ವಲ್ಪ ಬೇರೆ ವ್ಯಾಖ್ಯಾನ ನೀಡುತ್ತ, ಅಲ್ಲ ರೀ, ಮನೆಯಲ್ಲಿ ಕೂತು ಊಟ ಮಾಡೋ ಪದ್ಧತಿ ಈಗ ಬಹಳನೇ ಕಡಿಮೆ ಆಗಿದೆ, ಅದಕ್ಕೆ ಕಾರಣ ಇದಿನ ಫಾಸ್ಟ್ ಫುಡ್ ಗಳು. ಈ ಫಾಸ್ಟ್ ಫುಡ್ ಗಳು ಮೊದಲಿಗೆ ತಲೆ ಎತ್ತಿದಾಗ ಕೆಲವರು ಆತಂಕ ವ್ಯಕ್ತ ಪಡಿಸಿದ್ದು ಉಂಟು. ಆದರೆ ವಿಪರ್ಯಾಸ ಅಂದ್ರೆ ಈಗ ಈ ಫಾಸ್ಟ್ ಫುಡ್ ನಮ್ಮ ದೈನಂದಿನ ಬದುಕಾಗಿದೆ. ಅದು ತಪ್ಪು ಅಂತ ಯಾರಿಗೂ ಈಗ ಅನ್ನಿಸದೆ ಇರಬಹುದು, ಆದರೆ ಇಡಿ ಮನೆಯವರೆಲ್ಲ ಕೂತು ಊಟ ಮಾಡಿದ್ದ ಅನುಭವ ಇದ್ದವರಿಗೆ ಹಾಗು ಇನ್ನೂ ಅದನ್ನ ಪಾಲಿಸಿಕೊಂಡು ಬರುತ್ತಿರುವವರಿಗೆ ಎಲ್ಲೋ ಒಂದು ರೀತಿಯ ನೋವು ಕಾಡುತ್ತಾ ಇರೋದಂತೂ ನಿಜ. ಹಾಗೇನೆ ಇಂದು  ಡಬ್ಬಿಂಗ್ ಚಿತ್ರಗಳು ಮಾಡಲು ಬಿಟ್ಟರೆ ಮುಂದೊಂದು ದಿನ ಇದೆ ರೀತಿ ನಮಗೆ ಅನ್ನಿಸಿದರೆ ( ಯಾಕಂದ್ರೆ ನೈಜ ಕನ್ನಡ ಚಲನಚಿತ್ರಗಳನ್ನ ಅನುಭವಿಸಿರೋ ಕೊನೆಯ ಕೊಂಡಿ ನಾವುಗಳೇ ಆಗಿರುತ್ತೇವೆ) ಅದು ಆಶ್ಚರ್ಯವೇನಲ್ಲ.
ಆದರೆ ಇಲ್ಲಿ ನನ್ನನ್ನ ನಿಜವಾಗಲು ಕಾಡುತ್ತ ಇರೋ ವಿಷಯ ಏನು ಅಂದರೆ, ಈ ಡಬ್ಬಿಂಗ್ ಬೇಕು ಅನ್ನೋ ಮಂದಿಯಲ್ಲಿ ,ಕನ್ನಡ ಅಂದರೆ ಏನು ಮಾಡೋಕು ಸಿದ್ದ ಅನ್ನೋ ಹಲವಾರು ಸ್ನೇಹಿತರೆ ಇರೋದು. ಎಲ್ಲೆಲು ಕನ್ನಡ ರಾರಜಿಸಬೇಕು ಅನ್ನೋದು ನಿಜ, ಆದರೆ ಅದು ನಮ್ಮ ಬುಡವನ್ನ ಕೊಚ್ಚಿ ಅದರ ಮೇಲೆ ನಮ್ಮದಲ್ಲದ ಕನ್ನಡದ ಸೊಬಗನ್ನ ತೋರಿಸೋದಾದರೆ ಅದು ನಮಗೆ ಬೇಕಾ?
ಕನ್ನಡದ ಪ್ರೇಕ್ಷಕನಾಗಿ ನಾನು ಡಬ್ಬಿಂಗ್ ವಿರೋಧಿಸುತ್ತೇನೆ!!!

Monday, March 14, 2011

ಬೆಳೆಸೋದಾ? ಬೆಳೆಯಲು ಬಿಡೋದಾ?

ಈಗ ಎಲ್ಲಿ ನೋಡಿದರೂನು "ಕ್ರಿಕೆಟ್ ಜ್ವರ". ನಮ್ಮ ಹಳ್ಳಿಯ ಪುಟ್ಟ ಹುಡುಗನಿಂದ ಹಿಡಿದು ಜಾತ್ರೆಯಲ್ಲಿ ದನ ಕೊಳ್ಳೋ ಹಾಗೆ ಕ್ರಿಕೆಟಿಗರನ್ನ ಕೊಂಡುಕೊಂಡಿರುವ ಮಲ್ಲ್ಯ ಸಾಹೇಬರ ಬಳಗದಂತಿರೋ ವ್ಯವಹಾರಸ್ತರ, ಇಷ್ಟು ದಿನ ಕಾಲಿ ಕೂತಿದ್ದ ಬುಕ್ಕಿಗಳ, ಪ್ರಸಾರ ಮಾಡೋಕೆ ಒಂದೂವರೆ ತಿಂಗಳಿನ ತನಕ ಸುದ್ದಿ ಸಿಕ್ಕಿದೆ ಅಂತ ಹಿರಿ ಹಿರಿ ಹಿಗ್ಗುತ್ತಾ ಇರೋ ಮಾಧ್ಯಮಗಳ, ತಮ್ಮ ಹೊಸ ಪ್ರಿಯಕರ/ಪ್ರೇಯಸಿಯೊಡನೆ "ಜಸ್ಟ್ ಫ್ರೆಂಡ್ಸ್" ಅಂತಾನೆ ಎಲ್ಲ ಕ್ರಿಕೆಟ್ ಮೈದಾನಗಳಲ್ಲೂ ಕಾಣಿಸಿಕೊಳ್ಳೋ ನಾಯಕ ನಾಯಕಿಯರುಗಳ, ಮಾಡೋಕೆ ಜನ್ಮಕ್ಕೆ ಆಗೋ ಅಷ್ಟು ಕೆಲಸ ಇದ್ದರೂ ಕೇವಲ ಒಂದು ಪಂದ್ಯದ ಟಿಕೆಟ್ ಸಿಗಲಿಲ್ಲ ಅನ್ನೋ ವಿಷಯ ವಿಧಾನ ಮಂಡಲದಲ್ಲಿ ಚರ್ಚೆ ಮಾಡಬೇಕು ಅಂತ ಗುಟುರು ಹಾಕೋ ನಾಲಾಯಕ್ ರಾಜಕಾರಣಿಗಳ.... 
ಹೀಗೆ ಹೇಳ್ತಾ ಹೋದ್ರೆ ಎಲ್ಲರನ್ನೂ ಸೇರಿಸ್ಕೊಂಡು ಹೇಳಬೇಕಾಗುತ್ತೆ. ಹಾಗಾಗಿ ಇಂತಿಪ್ಪ ಎಲ್ಲರ ಮೈಮನಗಳಲ್ಲಿ ಈಗ ಸುಳಿದಾಡುತ್ತ ಇರೋ ಒಂದೇ ಪ್ರಮುಖ ವಿಷಯ ಅಂದರೆ-"ಕ್ರಿಕೆಟ್".  ಸೋಜಿಗ ಅಂದರೆ, ಇವರುಗಳಲ್ಲಿ ಕನಿಷ್ಠ 80 % ಜನಕ್ಕೆ ಈ ಆಟದ ಬಗ್ಗೆ ಗಂಧಾನೆ ಇರೋಲ್ಲ. ಆದ್ರೂನು 'ಪಾಯಸ ಕೊಟ್ಟೋರ ಕಡೆಗೆ ಪಂಚಾಯತಿ ಮಾಡಿದ' ಅನ್ನೋ ಹಾಗೆ ತೋಚಿದ್ದು-ತೋಚದೆ ಇರೋದು ಎಲ್ಲಾನೂ ಮಾತಾಡ್ಕೊಂಡು ತಮಗೂ ಕ್ರಿಕೆಟ್ ಬಗ್ಗೆ ಏನೂ ಗೊತ್ತಿಲ್ಲ ಅನ್ನೋದನ್ನ ಜಗಜ್ಜಾಯಿರ ಮಾಡ್ಕೊಳ್ಳೋ ಮೂರ್ಖ ಶಿಖಾಮಣಿಗಳೇ ಹೆಚ್ಚು.
ಹೋಗ್ಲಿ ಬಿಡಿ, ನಮ್ಮ ದೇಶದ ಜನಕ್ಕೆ ಮಕ್ಕಳನ್ನ ಮಾಡೋ ವೃತ್ತಿಯಿಂದ ಸ್ವಲ್ಪ ಸಮಯ ವಿರಾಮ ಕೊಡೋದ್ರಲ್ಲಾದ್ರು ಈ ಕ್ರಿಕೆಟ್ ಸ್ವಲ್ಪ ಮಟ್ಟಿಗೆ ಯಶ ಕಂಡಿದೆ ಅಂತಲೇ ಭಾವಿಸಿಕೊಂಡು, ನಮ್ಮ ವಿಷಯಕ್ಕೆ ಬರೋಣ. 
ಹೌದು, ನಮ್ಮಲ್ಲಿ ಎಷ್ಟು ಜನಕ್ಕೆ ನಾನು ಈ ಕೆಳಗೆ ಪಟ್ಟಿ ಮಾಡೋ ಆಟಗಳ ಬಗ್ಗೆ ತಿಳಿದಿದೆ? " ಕುಂಟಾಬಿಲ್ಲೆ"- "ಚಿನ್ನಿ ದಾಂಡು"- "ಮರ ಕೋತಿ"- "ಲಗೋರಿ"- " ಟಿಕ್ಕಿ"- "ಎಂಟು ಮನೆ/ ಹದಿನಾರು ಮನೆ ಆಟ"- "ಗೋಲಿ"- "ಚಿಣಿಮಿಣಿ"- "ಉಪ್ಪು ಕೊಡೆ ಸಾಕಮ್ಮ" ???? ಹೇಳ್ತಾ ಹೋದ್ರೆ ಮುಗಿಯಲಾರದಷ್ಟು ದೊಡ್ಡ ಪಟ್ಟಿ ಇದೆ, ಅಲ್ಲದೆ ಇವು ಕೇವಲ ನನ್ನ ನೆನಪಿನಲ್ಲಿ ಇರೋ-ಅಥವಾ ನಾನು ಕೇಳಿರೋ ನಮ್ಮ ಹಳ್ಳಿ ಆಟಗಳು. ನಾನು ಕೇಳದೆ/ಆಡದೆ ಇರೋ ಸಾಕಷ್ಟು ನಮ್ಮ ಮಣ್ಣಿನ ಸೊಗಡಿನ ಆಟಗಳು ಅವೆಷ್ಟಿದೆಯೋ ನಾ ಕಾಣೆ. 
ಹುಟ್ಟೋ ಮಗು ಇನ್ನ ಅಂಬೆಗಾಲು ಇಡೋಕೆ ಶುರು ಮಾಡಿದ್ದೆ ತಡ ನಾವುಗಳು ಅದಕ್ಕೆ ಆಗ್ಲೇ ಕ್ರಿಕೆಟ್ ಬ್ಯಾಟ್, ಹಾರೋ ಹೆಲಿಕಾಪ್ತೆರ್ ತಂದು ಕೊಟ್ಟಿರ್ತಿವಿ. ಆದ್ರೆ ಈ ಮೇಲೆ ತಿಳಿಸಿದ ಆಟಗಳ ಬಗ್ಗೆ ಹೇಳಿಕೊಡೋದು ಇರಲಿ, ನಮ್ಮ ಹಳ್ಳಿ ಕಡೆನೇ ಅವರನ್ನ ಕಳಿಸೋಲ್ಲ ಅಲ್ಲವ? ಹಿಂದಿನ ಕಾಲದಲ್ಲಿ ಬೇಸಿಗೆ ರಜ ಬಂತು ಅಂದ್ರೆ, ಹಳ್ಳಿಲಿ ಇರೋ ಅಜ್ಜಿ ಮನೆಗೆ ಓಡಿ ಹೋಗೋ ಮಕ್ಕಳು ಎಲ್ಲಿ, ಈಗಿನ ಕಾಲದಲ್ಲಿ ಬೇಸಿಗೆ ರಜ ಬಂತು ಅಂದ್ರೆ ಡಾನ್ಸ್/ಸಿಂಗಿಂಗ್/ಕರಾಟೆ/ಡ್ರಾಯಿಂಗ್ ಕ್ಲಾಸಸ್ ಅಂತ ಸ್ಟೇಟಸ್ ತೋರ್ಪಡಿಸೋ ಹುಚ್ಚು ಆಡಂಬರಗಳು ಎಲ್ಲಿ?
ಅಲ್ಲದೆ ಮೇಲೆ ಹೇಳಿದ ಆಟಗಳು ಖರ್ಚನ್ನ ಕೂಡ ಬಯಸೋಲ್ಲ. "ಕುಂಟಾಬಿಲ್ಲೆ" ಆಡೋಕೆ ಚೆನ್ನಾಗಿ ಸವೆದಿರುವ ಕಲ್ಲಿಂದ ಸ್ವತಹ ಮಾಡಿದ ಒಂದು 'ಬಿಲ್ಲೆ' - ಅಂಗಳದಲ್ಲಿ ಒಂದಷ್ಟು ಜಾಗ ಇದ್ರೆ ಸಾಕು. ದಿನ ಪೂರ್ತಿ ಹೊತ್ತೇ ಹೋಗಿದ್ದು ತಿಳಿಯೋಲ್ಲ. ಇನ್ನ "ಟಿಕ್ಕಿ''ಗೆ ಉಪಯೋಗಿಸಿ ಬಿಸಾಡಿದ ಬೆಂಕಿ ಪೊಟ್ಟಣದ ಕವರ್ ಸಾಕು. ಒಂದು ಪೊಟ್ಟಣದಿಂದ ಎರಡು ಟಿಕ್ಕಿ ಸಿಕ್ಕಂಗಾಯ್ತು. ಹೀಗೆ 4 ಜನ ಹುಡುಗರು ಸೇರಿಕೊಂಡು ಆ ಟಿಕ್ಕಿಗಳ  ರಾಶಿಯನ್ನ, ಮಣ್ಣಿನಿಂದ ಮಾಡಿದ ಗುಡ್ಡೆ ಮೇಲೆ ನಿಲ್ಲಿಸಿ, ನಿಗದಿತ ದೂರದಿಂದ ಮತ್ತದೇ "ಬಚ್ಚ"( ಕಲ್ಲನ್ನ ಸವೆದು ಮಾಡಿಕೊಳ್ಳೋ ಒಂದು ಸಣ್ಣ ಬಿಲ್ಲೆ) ದಿಂದ ಬೀಸಿ ಹೊಡೆದರೆ, ಆ ಮಣ್ಣು ಗುಡ್ಡೆಯಿಂದ ಹಾರಿ ಹೊರ ಬೀಳೋ ಟಿಕ್ಕಿಗಳಿಗೆಲ್ಲ ಗುರಿ ಇಟ್ಟವನೆ ರಾಜ. ಆ ಬೆಲೆಯಿಲ್ಲದ ಟಿಕ್ಕಿಗಳನ್ನ ಗೆಲ್ಲೋದರಲ್ಲಿ ಇದ್ದ ಮಜವನ್ನ ಇವತ್ತಿನ ಯಾವುದೇ ಜೂಜಾಟಾನೂ ಕೂಡ ನಿಮಗೆ ಕೊಡೊದು ಸಾಧ್ಯಾನೆ ಇಲ್ಲ. ಈಗಿನ ದಿನದಲ್ಲಿ ಮಗು ಏನಾದ್ರು ಸ್ಕೂಲಲ್ಲಿ ಬಿದ್ದು ಗಾಯ ಮಾಡ್ಕೊಂಡ್ರೆ ಪ್ರಿನ್ಸಿಪಾಲ್ ಮೇಲೆ ಕೇಸ್ ಹಾಕೋ ಪೋಷಕರು, ನಾವುಗಳು ''ಮರ ಕೋತಿ" ಆಡೋವಾಗ ಬಿದ್ದದ್ದನೆಲ್ಲ ಲೆಕ್ಕ ಹಾಕೊಕು ಸುಸ್ತು ಹೊಡಿತಿದ್ರೆನೋ?
ತಮ್ಮ ಮಕ್ಕಳಿಗೆ ಇಂತ ಆಟ ಆಡಿ, ಇಂತದನ್ನ ಆಡಬೇಡಿ ಅಂತ ಹೇಳೋ ಅಧಿಕಾರ- ಹಕ್ಕು ಎಲ್ಲ ತಂದೆ ತಾಯಂದಿರಿಗುನು ಇದೆ, ಒಪ್ಕೊಳ್ಳೋಣ. ಆದ್ರೆ ಮಕ್ಕಳಿಗೆ ಆ ರೀತಿ ನಿರ್ಬಂಧ ಹಾಕೋವಾಗ ತಾವು ಸರಿ ಇದೇವೆ ಅನ್ನೋದು ಎಷ್ಟು ಮಂದಿಗೆ  ಗೊತ್ತಿರತ್ತೆ? ಹಾಗಂತ ನಮ್ಮ ಮಕ್ಕಳಿಗೆ ಮೇಲೆ ಹೇಳಿದ ಆಟಗಳನ್ನೇ ಆಡಿಸಿ ಅಂತ ಅಲ್ಲ. ಮಕ್ಕಳನ್ನ ಮಕ್ಕಳಾಗಿ ಇರೋಕೆ ಬಿಡಿ. 
ಸೂಕ್ಷ್ಮವಾಗಿ ಗಮನಿಸಿ ನೋಡಿದ್ರೆ, ಹಿಂದಿನ ಕಾಲದಲ್ಲಿ ಆಡ್ತಾ ಇದ್ದ ಆಟಗಳು ಕೇವಲ ಆಟಗಳಾಗಿರಲಿಲ್ಲ. ಅವು ಪ್ರಕೃತಿದತ್ತ ಪಾಠಗಳಾಗಿದ್ದವು. "ಕುಂಟಾಬಿಲ್ಲೆ"ಯ ಆಟ ಕುಂಟಿಕೊಂಡು ಆಡಬೇಕು. ಅದು ಕುಂಟಿದರುನು ಗುರಿ ಮುಟ್ಟು ಅನ್ನೋ ಸಂದೇಶ ಕಲಿಸಿದರೆ, "ಟಿಕ್ಕಿ" ಸಣ್ಣ ಪೊಟ್ಟಣ ಕೂಡ ಸಂತೋಷವನ್ನ ಕೊಡಬಲ್ಲದು ಅನ್ನೋದನ್ನ ಸೂಚಿಸುತ್ತಿತ್ತು. "ಮರಕೋತಿ" ಆಟ ಹಸಿರಿನೊಂದಿಗೆ ಬೇರೆಯೋ ಪರಿಪಾಟ ಬೆಳೆಸಿದರೆ, "ಹದಿನಾರು ಮನೆ, ಎಂಟು ಮನೆ ಆಟ" ಬುದ್ದಿಯ ತೀಕ್ಷ್ಣತೆ ಮತ್ತು ಸಂಧರ್ಬ್ಹೊಚಿತ ನಡೆಯನ್ನ ಕಲಿಸಿಕೊಡುತಿತ್ತು. ಈಗ ನೀವೇ ಹೇಳಿ, ಯಾವ ಜಾನಿ ಸಕ್ಕರೆ ತಿಂದ ಅನ್ನೋದು ತಿಳಿಯೋದು ಮುಖ್ಯಾನೋ ಅಥವಾ ನಿಮ್ಮ ಮಗು ಸಕ್ಕರೆಗು-ಉಪ್ಪಿಗೂ ವ್ಯತ್ಯಾಸ ತಿಳಿಯೋ ಬುದ್ದಿಮಟ್ಟ ಬೆಳೆಸಿಕೊಳ್ಳೋದು  ಮುಖ್ಯಾನೋ?
ಆದ್ದರಿಂದ, ಬೇಸಿಗೆ ರಜೆ ಓಡಿ ಬರ್ತಾ ಇದೆ. ನಿಮ್ಮ ಮಕ್ಕಳನ್ನ ಮನೆಯೋಳಗೋ, ಇಲ್ಲ ಮನೆಪಾಠಗಳಿಗೋ ದೂಡಿ ಅವರುಗಳನ್ನ ಗಿಳಿಗಳನ್ನಾಗಿ  ಮಾಡಬೇಡಿ. ಸ್ವಚ್ಚಂದವಾಗಿ ತಮಗೆ ಇಷ್ಟ ಬಂದಿದ್ದನ್ನ ಮಾಡೋಕೆ ಬಿಡಿ. ಮಕ್ಕಳನ್ನ ಅವ್ರಿಗೆ ಇಷ್ಟ ಆಗೋ ಹಾಗೆ ಬೆಳೆಸಿ. ನಮ್ಮ ಇಷ್ಟಕ್ಕೆ ತಕ್ಕಂತೆ ಅಲ್ಲ. ವರ್ಲ್ಡ್ ಕಪ್, ಐ.ಪಿ.ಎಲ್. ಇವೆಲ್ಲೇ ಇದ್ದೆ ಇರ್ತವೆ. ಸಿನಿಮಾಗಳು ಬರ್ತಾನೆ ಇರ್ತವೆ. ಅವುಗಳಿಗೆಲ್ಲ ರಜೆ ಹಾಕಿ, ರಜೆಯ ನಿಜವಾದ ಸವಿಯನ್ನ ಸವಿಯಿರಿ. ಪ್ರಕೃತಿಗಿಂತ ದೊಡ್ದವರಿಲ್ಲ. ಪ್ರಕೃತಿಯ ವಿರುದ್ದವಾಗಿ ಬದುಕೋದು ಬೇಡ. ನಮ್ಮ ಮಕ್ಕಳನ್ನ ಕೂಡ ಹಾಗೆ ಬೆಳೆಸೋದು ಬೇಡ!  ಬೆಳೆಸೋದಾ? ಬೆಳೆಯಲು ಬಿಡೋದಾ? ಅನ್ನೋ ಜಿಜ್ಞಾಸೆ ಬೇಡ. ಬೆಳಯಲು ಬಿಡಿ.

Thursday, January 20, 2011

ಇದೇನಾ ಸಭ್ಯತೆ? ಇದೇನಾ ಸಂಸ್ಕೃತಿ?

ಹೊಸ ವರ್ಷನ ತುಂಬು ಹೃದಯದಿಂದ ಸ್ವಾಗತಿಸಿದ್ದಾಯ್ತು, ಸಂಕ್ರಮಣದ ಎಳ್ಳು-ಬೆಲ್ಲಾನು ಸವಿದದ್ದಾಯ್ತು. ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡು ಅನ್ನೋದು ವಾಡಿಕೆ. ಆದ್ರೆ ಈ ವರ್ಷದ ಮೊದಲ ಬ್ಲಾಗನ್ನ ಸ್ವಲ್ಪ ಖಾರದ ಹಾಗು ಅಷ್ಟೇ ನೋವಿನ ವಿಷಯದೊಂದಿಗೆ ಶುರು ಮಾಡ್ಬೇಕಾಗಿಬಂದಿದೆ. 
ನನ್ನ ಕಳೆದ ಕೆಲವು ಬ್ಲಾಗಗಳಲ್ಲಿ ನಮ್ಮ ವೃತ್ತಿಯ ಸುಂದರ ಮುಖದ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದೆ. ಆದ್ರೆ ಅದರ ಇನ್ನೊಂದು ಬದಿಯಲ್ಲಿ ಇರೋ ನೋವು, ಹತಾಶೆಯ ಮುಖ ಹೊರಗಿನ ಪ್ರಪಂಚಕ್ಕೆ ಕಾಣೋದೆ ಇಲ್ಲ. ಯಾಕಂದ್ರೆ ಎಲ್ಲ ವಿಷಯಗಳನ್ನ ನಾಟಕೀಯವಾಗಿ ಬಣ್ಣಿಸೋ ಹಾಗು ಅದೇ ರೀತಿಯಲ್ಲಿ ಸ್ವೀಕರಿಸೋ ದೃಷ್ಟಿಕೋನ ನಮ್ಮ ಜನಗಳದ್ದು. ಯಾವುದೇ ಸಿನಿಮಾದಲ್ಲಿ ನೋಡಿದರೂನು ಡಾಕ್ಟರ್ ಅಂದ್ರೆ ಒಂದು ಮೆಕ್ಯಾನಿಕಲ್ ಯಂತ್ರ ಅನ್ನೋ ಹಾಗೆ ಪಾತ್ರ ಸೃಷ್ಟಿ ಮಾಡಿರ್ತಾರೆ. ರೋಗಿಯ ನಾಡಿ ನೋಡು, ಜೀವ ಇದೆಯೋ ಇಲ್ವೋ ಹೇಳು- ಆಪರೇಷನ್ ಗೆ ದುಡ್ಡು ಕೀಳೋ ರಾಕ್ಷಸರು ಅಂತ ತೋರಿಸು, ಇತ್ಯಾದಿ. ಇವರದು ಹೀಗಾದ್ರೆ  ಇನ್ನ ಟಿ.ವಿ ಮಧ್ಯಮವಂತೂ ಒಂದು ಹೆಜ್ಜೆ ಮುಂದೆ ಹೋಗಿ ಪರಿಸ್ತಿತಿಯ ತಳ ಬುಡ ವಿಚಾರಿಸದೆ ಪ್ರಸಾರ ಮಾಡೋ ಒಂದೇ ಸುದ್ದಿ ಅಂದ್ರೆ-"ವೈದ್ಯರ ನಿರ್ಲಕ್ಷದಿಂದ ರೋಗಿ ಸಾವು, ಆಸ್ಪತ್ರೆ ಧ್ವಂಸ". ಅಲ್ಲದೆ ಆ ಕ್ಯಾಮರಾಮನ್ ಮಹಾಶಯ ಕಲ್ಲು ಹೊಡಿಯೋದನ್ನ ಅಥವಾ ಡಾಕ್ಟರ್ ಮೇಲೆ ಹಲ್ಲೆ ಮಾಡ್ತಿರೋ ವೀಡಿಯೊನ ಸ್ಪಷ್ಟವಾಗಿ ತೆಗಿತಿರ್ತಾನೆ. ಸ್ತಿಮಿತ ಇರೋ ಯಾರೇ ಆದರೂ ಅಲ್ಲಿ ಆ ಸಮಯದಲ್ಲಿ ಕಲ್ಲು ಹೊಡಿಯೋರಿಗೆ ಬುದ್ದಿ ಹೇಳ್ತಾರೆ ಅಥವಾ ಏನೂ ಮಾಡಾಕೆ ಆಗದೆ ಇದ್ರೆ ತಮ್ಮ ಪಾಡಿಗೆ ತಾವು ಇರ್ತಾರೆ. ಆದರೆ ಅದು ಬಿಟ್ಟು ಆ ಸನ್ನಿವೇಶಾನ ಕೇವಲ ಮಜಾ ಅಂತ ಭಾವಿಸಿ ಚಿತ್ರೀಕರಿಸೋ ಇಂತ ಮನಸ್ಸಿನವರಿಗೆ ಏನ್ ಹೇಳೋಣ?
ಇಲ್ಲಿ ನಾನು ಹೇಳೋಕೆ ಹೊರಟಿರೋ ಪ್ರಮುಖ ವಿಷಯ ಅಂದ್ರೆ-
*** ಒಬ್ಬ ರೋಗಿ ಒಬ್ಬ ವೈದ್ಯನ ಬಳಿ ಬಂದಿದ್ದಾನೆ ಅಂದ ಮೇಲೆ ಅಲ್ಲಿಗೆ ಆ ವೈದ್ಯನ ಮೇಲೆ ನಂಬಿಕೆ ಇಟ್ಟೇ ಬಂದಿರ್ತಾನೆ. ಅಂದ ಮೇಲೆ ವೈದ್ಯರಾದ ನಮಗೆ ಇದರ ಅರಿವು, ಜವಾಬ್ದಾರಿ ಮತ್ತು ನಂಬಿಕೆ ಉಳಿಸಿಕೊಬೇಕು ಅನ್ನೋದು ತಿಳಿದಿರತ್ತೆ ಅಲ್ಲವಾ?ಪ್ರತಿಯೊಬ್ಬ ವೈದ್ಯ ಕೂಡಾ ಯಾವುದೇ ರೋಗಿಯನ್ನಾದರೂ ನೋಡೋದು ತನ್ನ ಕರ್ತವ್ಯ ಅಂತಾನೆ ಭಾವಿಸ್ತಾನೆ ಹಾಗು  ನಿಭಾಯಿಸ್ತಾನೆ. ಅನಿವಾರ್ಯ ಪರಿಸ್ತಿತಿಯಲ್ಲಿ ಕೆಲವೊಂದು ಸಲ ಕೈ ಮೀರಿ ರೋಗಿಯ ಪ್ರಾಣ ಹೋದರೆ ಅದಕ್ಕೆ ಯಾವಾಗಲೂ ವೈದ್ಯ ಹೇಗೆ ಕಾರಣ ಆಗ್ತಾನೇ? 
ಸಾಮಾನ್ಯವಾಗಿ ಕೇಳಿ ಬರೋ ಮಾತು ಅಂದರೆ ವೈದ್ಯನ ನಿರ್ಲಕ್ಷದಿಂದಲೇ ಸಾವಗಿದೆ ಅಂತ. ಒಂದು ನಿಮಿಷ ನೀವೇ ಯೋಚನೆ ಮಾಡಿ ಹಾಗು ನಿಮಗೆ ನೀವೇ ಉತ್ತರನ ಕಂಡುಕೊಳ್ಳಿ.- "ಯಾವತ್ತಾದ್ರು ಯಾರನ್ನಾದರು ನೋಡಿಕೊಳ್ಳೋಕೆ ಒಂದು ರಾತ್ರಿ ನಿದ್ದೆ ಕೆಟ್ಟಿದ್ದೀರಾ?" ನಿಮ್ಮ ತಂದೆ-ತಾಯಿ-ಹೆಂಡತಿ-ಮಕ್ಕಳನ್ನ ಬಿಟ್ಟು ಬೇರೆಯವರನ್ನ ನೋಡ್ಕೊಳ್ಳೋಕೆ,ಯಾಕಂದ್ರೆ ಅವರನ್ನ ನೋಡಿಕೊಳ್ಳೋದು ನಮ್ಮಗಳ ಕರ್ತವ್ಯ ಅಥವಾ ಇನ್ನ ಕೆಲವರು ಅದನ್ನ ಕರ್ಮ ಅಂತಾನು ಭಾವಿಸುತ್ತಾರೆ. 
ಹೀಗಿರೋವಾಗ ಒಬ್ಬ ವೈದ್ಯನಿಗೆ ರೋಗಿ ಯಾವುದೇ ರೀತಿಲಿ ಸಂಬಂಧಿ ಅಲ್ಲ, ಸ್ನೇಹಿತ ಆಗಿರೋವ್ನಲ್ಲ, ಜೀವನಕ್ಕೆ ದಾರಿ ಮಾಡಿಕೊಡೋನಲ್ಲ- ಹಾಗಿದ್ರೂ ಅವ್ನು ರಾತ್ರಿ ಎಷ್ಟೇ ಹೊತ್ತಿಗೆ ಬರಲಿ, ಏನೇ ತೊಂದರೆ ಅಂತ ಹೇಳಲಿ, ವೈದ್ಯರುಗಳು ನಿದ್ದೆ ಕೆಟ್ಟು  ವಿಚಾರಿಸುತ್ತರಲ್ಲವೇ? ಎಷ್ಟೋ ರೋಗಿಗಳಿಗೋಸ್ಕರ ನಮ್ಮ ಕುಟುಂಬದೊಂದಿಗಿನ ಕೆಲವು ಸಮಾರಂಭಗಳನ್ನೂ ಬಿಟ್ಟು ಬರುತ್ತೆವಲ್ಲವೇ? ಹಾಸ್ಯ ಅನಿಸಿದರೂನು ನಿಜ ಅಂದರೆ ಎಷ್ಟೋ ಸಲ ಹೆಂಡತಿ ಜೊತೆ ಬೆಚ್ಚಗೆ ಮಲಗಿದ್ರೂನು ಎದ್ದು ಬಂದಿರುತ್ತಾರೆ!!! ಕುಡಿದು ಮೋಜು ಮಾಡಿ ಬಿದ್ದು ಬರೋ ಸತ್(?)ಪ್ರಜೆಗಳನ್ನ ನೋಡೋಕೆ ಅರ್ಧ ಮಾಡಿರೋ ಊಟ ಬಿಟ್ಟು ಬರ್ತಿವಿ. ದೈನಂದಿನ ಉದಾಹರಣೆನೆ ತಗೊಳ್ಳಿ- ಎಷ್ಟು ಸಲ ನಿಮ್ಮ ಮಧ್ಯಾನದ ನಿದ್ದೆ ಮಧ್ಯ ಒಬ್ಬ ಸ್ನೇಹಿತ ಫೋನ್ ಮಾಡಿ ಊರಿಗೆ ಬಂದಿದ್ದೀನಿ, ಬಸ್ ಸ್ಟ್ಯಾಂಡ್ ನಲ್ಲಿದ್ದೀನಿ ಅಂದಾಗ ಸುಳ್ಳೇ ಊರಲ್ಲಿ ಇಲ್ಲ ಅಂತ ಹೇಳಿಲ್ಲ? ಯಾರಾದರು ವೈದ್ಯ ಹಾಗೆ ಮಾಡಿದರೆ ಹೇಗಿರತ್ತೆ ಅನ್ನೋ ಕಲ್ಪನೆನೆ ಭಯಂಕರ ಅಲ್ವಾ?
ಇಂತ ಸಂಧರ್ಭಗಳನ್ನ ಪ್ರತಿ ದಿನ ನಾವುಗಳು ಎದುರಿಸುತ್ತೇವೆ ಮತ್ತು ಯಾರಿಗೂ ಕೂಡ ಅದು ಗೋಳು ಅಂತಲೋ ಅಥವಾ ನೋಡಿ ನಮಗೆ ಎಷ್ಟು ಕಷ್ಟ ಇದೆ ಅಂತನೋ ಹೇಳಿಕೊಳ್ಳೋದಿಲ್ಲ. ಯಾಕಂದರೆ ನಮಗೆ ರೋಗಿಯೊಬ್ಬ ಗುಣವಾಗಿ ಹೋಗೋವಾಗ 'ನಗು' ಚೆಲ್ಲುತ್ತಾನಲ್ಲ, ಅದು ಎಲ್ಲ 'ನಗದಿ'ಗಿಂತ ಹೆಚ್ಚಿನ ಧನ್ಯ ಭಾವ ಕೊಡುತ್ತೆ. ಇಲ್ಲೆಲ್ಲೂ ಕೂಡ ಜನರಿಗೆ ವೈದ್ಯರ ಲಕ್ಷ ಕಾಣಿಸೋಲ್ಲ, ಆದ್ರೆ ರೋಗಿ ಸತ್ತಾಗ ಮಾತ್ರ ಅದು ಹೇಗೆ ನಿರ್ಲಕ್ಷದಿಂದಲೇ ಸತ್ತದ್ದು ಅನ್ನೋ ನಿರ್ಣಯಕ್ಕೆ ಬಂದುಬಿಡುತ್ತಾರೆ ಜನ?
ಅಲ್ಲಾರೀ, ಕಾಣದೇ ಇರೋ ದೇವರಿಗೆ ಎಡೆ ಇಡ್ತೀವಿ, ಅವ್ನು ಏನೂ ಕೊಡಲಿಲ್ಲ ಅಂದ್ರುನು ದಿನ ಕೈ ಮುಗಿತಿವಿ, ಅದೇ ಒಬ್ಬ ವೈದ್ಯ ನಿಮ್ಮನ್ನ ಪರೀಕ್ಷೆ ಮಾಡೋಕೆ ಐದು ನಿಮಿಷ ತಡ ಮಾಡಿದ್ರೆ ಹಲ್ಲೆ ಮಾಡೋ ಮಟ್ಟಕ್ಕೆ ಹೋಗ್ತಿರ. ಇದೇನಾ ಸಭ್ಯತೆ? ಇದೇನಾ ಸಂಸ್ಕೃತಿ?
ಇಷ್ಟೆಲ್ಲಾ ಯಾಕೆ ಹೇಳಬೇಕಾಗಿ ಬಂದಿದೆ ಅಂದ್ರೆ ಇವತ್ತಿನ ಪರಿಸ್ತಿತಿಯಲ್ಲಿ ಒಬ್ಬ ವೈದ್ಯ ರೋಗಿಯನ್ನ ನೋಡೋದಕ್ಕೆ ಹೆದರಬೇಕಾದ ವಾತಾವರಣ ಇದೆ. ನಮಗೆ ಗೌರವ ಕೊಡೊ ಮಾತು ಹಾಗಿರಲಿ, ನಮ್ಮ ಮೇಲೆ ಹಲ್ಲೆ ಮಾಡದೆ ಇದ್ರೆ ಸಾಕಪ್ಪ ಇವತ್ತು ಅಂತ ಪ್ರತಿದಿನ ಎದ್ದು ಬರೋ ಎಷ್ಟೋ ವೈದ್ಯರಿದ್ದಾರೆ. ಇದಕ್ಕೆಲ್ಲ ಕಾರಣ ಅಂದ್ರೆ ನಮ್ಮ ಮಾಧ್ಯಮಗಳ ಬೇಜವಾಬ್ದಾರಿತನ ಹಾಗು ನಮ್ಮ ಜನರ ಅನಕ್ಷರತೆ. ಒಬ್ಬ ರೋಗಿಯ ರೋಗದ ತೀವ್ರತೆಯನ್ನ ವೈದ್ಯ ಮೊದಲೇ ತಿಳಿಸಿ ಹೇಳಿದ್ದರೂ ಕೂಡ, ವೈದ್ಯರ ಬಳಿ ಬಂದ ಮೇಲೆ ರೋಗಿ ಗುಣ ಆಗಲೇಬೇಕು ಅನ್ನೋ ವಿಚಿತ್ರ ಮನೋಭಾವ ಇದೆ ಜನರಲ್ಲಿ. ಇದು ಬದಲಾಗಬೇಕು ಮತ್ತು ಸತ್ಯವನ್ನ ಒಪ್ಪಿಕೊಳ್ಳೋ ಎದೆಗಾರಿಕೆ ನಮ್ಮ ಜನಗಳಿಗೆ ಬರಬೇಕು. ಇದನ್ನ ಸಾಧ್ಯವಾಗಿಸೋದರಲ್ಲಿ ತುಂಬಾ ಜನರಿಗೆ ಸುಲಭವಾಗಿ ತಲುಪೋ ಸಾಧನವಾದ ಮಾಧ್ಯಮಗಳು ಮಾಡಬೇಕು. ಆದರೆ ಈ ಮಾಧ್ಯಮಗಳದ್ದು "ಬೇಲಿಯೇ ಎದ್ದು ಹೊಲ ಮೇಯುವ ಚಾಳಿ ". ಇದು ಬದಲಾಗಬೇಕು.
ಏನೇ ಆದರು ನಾವು ನಮ್ಮ ಕೆಲಸನ ಮುಂದಿವರಿಸಲೇ ಬೇಕು ಹಾಗು ಮುಂದುವರಿಸುತ್ತೇವೆ ಕೂಡ.
ಮತ್ತೊಮ್ಮೆ ಬೆಟಿಯಾಗೊವರೆಗೂ.....